


ಮಂಗಳೂರು: ಡ್ರಗ್ಸ್ ಮುಕ್ತ ಕ್ಯಾಂಪಸ್ ಗೆ ಪಣ ತೊಟ್ಟಿರುವ ಮಂಗಳೂರು ನಗರ ಪೊಲೀಸರ ಕಾರ್ಯಕ್ಕೆ ಮಹತ್ವದ ಗೆಲುವು ದೊರೆತಿದೆ. ಒಟ್ಟು 98 ಡ್ರಗ್ಸ್ ವ್ಯಸನಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡಿದ ಬಳಿಕ ಅವರಲ್ಲಿ ಶೇ. 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಪೂರ್ಣ ವ್ಯಸನಮುಕ್ತರಾಗಿರುವುದು ದೃಢಪಟ್ಟಿದೆ.




ನಗರದ 150 ಕಾಲೇಜುಗಳಲ್ಲಿ ಜನವರಿಯಿಂದ ಈವರೆಗೆ ಒಟ್ಟು 8,310ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 98 ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿತ್ತು. ಈ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಗಳ ಸಹಯೋಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗಿತ್ತು. ಕೌನ್ಸಿಲಿಂಗ್ ಬಳಿಕ 50 ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಒಳಪಡಿಸಿದಾಗ 38 ವಿದ್ಯಾರ್ಥಿಗಳ ವರದಿ ‘ನೆಗೆಟಿವ್’ ಬಂದಿದೆ. ಉಳಿದ 12 ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಿ ಕೌನ್ಸಿಲಿಂಗ್ ಪ್ರಕ್ರಿಯೆ ಮುಂದುವರಿಸಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.











