ಲಿಫ್ಟ್ ನಲ್ಲಿ ಸಿಲುಕಿದ ಮೂವರ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಮಂಗಳೂರು: ನಗರದ ಅತ್ತಾವರ ಸಮೀಪದ ಹೊಟೇಲ್ ಇಹಾಮ್ ಪ್ಯಾರಡೈಸ್ ನಲ್ಲಿ ಶನಿವಾರ ಬೆಳಗ್ಗೆ ತಾಂತ್ರಿಕ ದೋಷದಿಂದ ಲಿಫ್ಟ್ ಬಾಗಿಲು ತೆರೆಯದೆ, ಮೂವರು ಸುಮಾರು ಒಂದು ಗಂಟೆ ಕಾಲ ಒಳಗಡೆ ಸಿಲುಕಿ ಪರದಾಡಿದ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಸಾಂದಾರ್ಭಿಕ ಚಿತ್ರ

ತೆಲಂಗಾಣ ಮೂಲದ ಕೃಷ್ಣ ರೆಡ್ಡಿ (60), ರಾಮರಾವ್ ಯಾದವ್ (38) ಹಾಗೂ ಆಲ್ಬರ್ಟ್ (61) ರಕ್ಷಿಸಲ್ಪಟ್ಟವರು.

ತೆಲಂಗಾಣದಿಂದ ಮಂಗಳೂರಿಗೆ ಆಗಮಿಸಿದ್ದ ಈ ಮೂವರು ಅತ್ತಾವರದ ಲಾಡ್ಜ್‌ನಲ್ಲಿ ತಂಗಿದ್ದರು. ಶನಿವಾರ ಬೆಳಿಗ್ಗೆ ರೂಮ್ ಖಾಲಿ ಮಾಡಿ, ಲಗೇಜ್ ಸಮೇತ ಲಿಫ್ಟ್ ಮೂಲಕ ಕೆಳಗೆ ಬರುತ್ತಿದ್ದರು. ಲಿಫ್ಟ್ ನೆಲಮಹಡಿಗೆ ಬಂದು ತಲುಪಿತಾದರೂ, ತಾಂತ್ರಿಕ ಸಮಸ್ಯೆಯಿಂದಾಗಿ ಬಾಗಿಲು ತೆರೆಯಲಿಲ್ಲ. ಸುಮಾರು 55 ನಿಮಿಷದಿಂದ ಒಂದು ಗಂಟೆ ಕಾಲ ಒಳಗಡೆಯೇ ಸಿಲುಕಿಕೊಂಡಿದ್ದ ಕಾರಣ, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆತಂಕಕ್ಕೀಡಾಗಿದ್ದರು. ಈ ನಡುವೆ ಗೂಗಲ್‌ನಲ್ಲಿ ಅಗ್ನಿಶಾಮಕ ದಳದ ಸಂಖ್ಯೆ ಹುಡುಕಿ ಕರೆ ಮಾಡಿದ್ದಾರೆ.

ಮಾಹಿತಿ ದೊರೆತ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹೈಡ್ರಾಲಿಕ್ ಸ್ಪ್ರೆಡ್ಡರ್ ಹಾಗೂ ಕಟ್ಟರ್ ಉಪಕರಣಗಳನ್ನು ಬಳಸಿ ಲಿಫ್ಟ್ ಬಾಗಿಲನ್ನು ಬಲವಂತವಾಗಿ ತೆರೆದು, ಮೂವರನ್ನೂ ಸುರಕ್ಷಿತವಾಗಿ ಹೊರತಂದರು.

LEAVE A REPLY

Please enter your comment!
Please enter your name here