


ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ 40ನೇ ವರ್ಷಾಚರಣೆ ಪ್ರಯುಕ್ತ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ನ.3ರಿಂದ 15ರವರೆಗೆ ನಗರದ ಪುರಭವನದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅತಿ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆಗೂ ಸಿದ್ಧತೆ ನಡೆದಿದೆ.





ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ನ.3ರಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಬೆಳಗ್ಗೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸುವರು ಎಂದರು.


ಕಾರ್ಯಕ್ರಮದಲ್ಲಿ ಅತಿ ದೀರ್ಘ ಅವಧಿಯ ಸಮೂಹ ಗಾಯನದ ಗಿನ್ನೆಸ್ ದಾಖಲೆ ರಚಿಸಲು ಪ್ರಯತ್ನಿಸಲಾಗುವುದು. ನ.3 ಬೆಳಗ್ಗೆ 6ರಿಂದ ಮುಂದಿನ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಅತಿ ದೀರ್ಘ ಅವಧಿಯ, ಸಮೂಹ ಗಾಯನದ ಗಿನ್ನೆಸ್ ದಾಖಲೆ ರಚಿಸುವ ಕಾರ್ಯಕ್ರಮ ನಡೆಯಲಿದೆ. ಕೊಂಕಣಿ ನಿರಂತರಿ ಸಂಸಾರ್ ಸರಾಸರಿ (ಕೊಂಕಣಿ ನಿರಂತರವಾಗಿರಲಿ- ಜಗದ ಕೊನೆತನಕ ಉಳಿಯಲಿ) ಹೆಸರಿನ ಈ ಪ್ರಯತ್ನದಲ್ಲಿ 6789ಕ್ಕೂ ಅಧಿಕ ಗಾಯಕರು, 250ಕ್ಕೂ ಅಧಿಕ ಸಂಗೀತ ಸಂಯೋಜಕರು ರಚಿಸಿದ, ವಿವಿಧ ಭಾಷಾ ಪ್ರಬೇಧಗಳ 4500ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಿ ಈ ವಿಶ್ವ ದಾಖಲೆ ಬರೆಯಲಿದ್ದಾರೆ. ಸಂಗೀತ ಗುರು ಜೊಯೆಲ್ ಪಿರೇರಾ ಈ ದಾಖಲೆಯ ಪ್ರಧಾನ ಸಂಗೀತ ನಿರ್ದೇಶಕ. ಈಗಾಗಲೇ ಗಿನ್ನೆಸ್ ದಾಖಲೆ ಬಗ್ಗೆ ಲಂಡನ್ನಿನ ಕಚೇರಿಯಲ್ಲಿ ನೋಂದಣಿಯಾಗಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಪಿಂಟೊ ತಿಳಿಸಿದರು.
ಸಮ್ಮೇಳನದಲ್ಲಿ ಶೈಕ್ಷಣಿಕ ಮೆರುಗು ಹಾಗೂ ಅಂತಾರಾಷ್ಟ್ರೀಯ ಆಯಾಮ ನೀಡಲು 12 ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ 12 ಹಿರಿಯ ಸಂಗೀತಗಾರರಿಗೆ ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕೊಂಕಣಿ ನಿರಂತರಿ ಶೈಲಿಯ ಸಂಗೀತ ಸಂಜೆ, ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತದ ಬಗ್ಗೆ ಮಾಹಿತಿ ನೀಡುವ, ಕೊಂಕಣಿ ಜನ ಜೀವನ, ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ನಡೆಯಲಿದೆ. ಕೊಂಕಣಿ ಸಂಗೀತಕ್ಕೆ ಹಿರಿಮೆ ತಂದುಕೊಟ್ಟ ಹಿರಿ- ಕಿರಿಯ ಸಂಗೀತಗಾರರ ಬಗ್ಗೆ ಮಾಹಿತಿ ಮಂದಿರ, ಕೊಂಕಣಿಯ ವಿವಿಧ ಸಮುದಾಯಗಳ ಖಾದ್ಯ ವೈವಿಧ್ಯಗಳ ಮಾರಾಟ ಮಳಿಗೆಗಳು ಇರಲಿವೆ. ನ.15 ರಂದು ಸಂಜೆ 6.12ಕ್ಕೆ ಗಿನ್ನೆಸ್ ದಾಖಲೆಯ ಗಾಯನ ಅಂತ್ಯವಾಗಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಇದ್ದರು.








