


ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚುವ ಉದ್ದೇಶದಿಂದ ‘ಪ್ರತಿಭಟನೆ’ ಎಂಬ ಬೀದಿ ನಾಟಕ ಆರಂಭಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಭಾಗ್ ವಾರ್ಡ್‌ನಲ್ಲಿ ರಸ್ತೆ ರಿಪೇರಿ ಆಗಿಲ್ಲ ಎಂದು ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 2019ರಿಂದ 2025ರವರೆಗೆ ಬಿಜೆಪಿ ಪಕ್ಷದ ಆಡಳಿತವಿತ್ತು. ಕಳೆದ 8 ವರ್ಷಗಳಿಂದ ವೇದವ್ಯಾಸ ಕಾಮತ್ ಅವರೇ ಮಂಗಳೂರು ನಗರದ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ರಿಂದ 2023 ರತನಕ ರಾಜ್ಯದಲ್ಲಿಯೂ ಬಿಜೆಪಿಯೇ ಸರ್ಕಾರದಲ್ಲಿತ್ತು. ಬಿಜೆಪಿ ಆಡಳಿತವಿರುವಾಗ ಮತ್ತು ಶಾಸಕರು ಅಧಿಕಾರದಲ್ಲಿದ್ದಾಗ ಇಲ್ಲಿಯ ರಸ್ತೆಗಳನ್ನು ಏಕೆ ಅಭಿವೃದ್ಧಿಪಡಿಸಲಿಲ್ಲ ಎಂದು ವಿನಯರಾಜ್ ಪ್ರಶ್ನೆ ಮಾಡಿದರು.





ಮಹಾನಗರ ಪಾಲಿಕೆಯ ಅವಧಿ ಮುಗಿದು ಒಂದೂವರೆ ವರ್ಷವಾಗಿದ್ದು, ಅಂದು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಸ್ಥಿತಿಯಲ್ಲಿಟ್ಟಿದ್ದರೆ ಇಂದು ಇಂತಹ ಬೀದಿ ನಾಟಕ ಮಾಡುವ ಪ್ರಮೇಯ ಬರುತ್ತಿರಲಿಲ್ಲ ಎಂದು ಟೀಕಿಸಿದರು.


ಶಾಸಕರು ಮಾತ್ರವಲ್ಲದೆ ಅಲ್ಲಿನ ಬಿಜೆಪಿ ಕಾರ್ಪೊರೇಟರ್ ಕಾವ್ಯ ನಟರಾಜ್, ಬಿಜೆಪಿ ಅಧಿಕಾರವಧಿಯ 5 ಮೇಯರ್‌ಗಳು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2ರ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ 145 ಕೋಟಿ ರು. ಅನುದಾನ ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಸಭೆಯ ಅನುಮೋದನೆಯೊಂದಿಗೆ ಮಂಗಳೂರು ನಗರದ ರಸ್ತೆ ಅಭಿವೃದ್ಧಿಗೆ ಒಟ್ಟು 400 ಕೋಟಿ ರು. ಹಣ ಬಿಡುಗಡೆಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಅನುದಾನವಾಗಿ ಪ್ರತಿ ಶಾಸಕರಿಗೆ 25 ಕೋಟಿ ರು. ನೀಡಿದ್ದರು. ನೈಸರ್ಗಿಕ ವಿಕೋಪ ನಿಧಿಯ ಅಡಿಯಲ್ಲಿ ಸುಮಾರು 10 ಕೋಟಿ ರು. ಅನುದಾನ ಮಹಾನಗರ ಪಾಲಿಕೆಗೆ ಬಂದಿದೆ.15ನೇ ಹಣಕಾಸು ಆಯೋಗದಿಂದ ಪ್ರತಿವರ್ಷ ಸುಮಾರು 10 ಕೋಟಿ ರು. ಮತ್ತು ರಾಜ್ಯ ಹಣಕಾಸು ಆಯೋಗದಿಂದ ಸುಮಾರು 5 ಕೋಟಿ ರು. ಅನುದಾನ ಲಭ್ಯವಾಗುತ್ತಿತ್ತು. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿಯೂ ಸುಮಾರು 40ರಿಂದ 50 ಕೋಟಿ ರು. ಕಾಮಗಾರಿಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇದರಲ್ಲಿ ಅಕ್ರಮವಾಗುತ್ತಿದೆ ಎಂಬ ಕಾರಣಕ್ಕಷ್ಟೇ ಹಿಂದಿನ ಸರ್ಕಾರದ ಕೆಲವು ಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆಯೇ ಹೊರತು ಸರ್ಕಾರ ಸಂಪೂರ್ಣವಾಗಿ ರದ್ದುಪಡಿಸಿಲ್ಲ. ಸರ್ಕಾರದ ಕಾಮಗಾರಿ ಅನುಷ್ಠಾನವಾಗಲು ಅಧ್ಯಕ್ಷರಾಗಿ ಇರುವವರು ಶಾಸಕರು. ಇಷ್ಟೆಲ್ಲಾ ಅನುದಾನ ಬಂದರೂ ಅವರು ಕಾಮಗಾರಿ ನಿರ್ವಹಿಸಲಿಕ್ಕೆ ಶಾಸಕ ಕಾಮತ್ ಅವರಿಗೆ ಏಕೆ ಸಾಧ್ಯವಾಗಲಿಲ್ಲ? ಈಗ ಪ್ರತಿಭಟನೆ ಮಾಡುವ ಉದ್ದೇಶವೇನು ಎಂದು ಎಸಿ ವಿನಯರಾಜ್ ಪ್ರಶ್ನಿಸಿದರು.
ಶಾಸಕರು ತಮ್ಮ ಎಂಟು ವರ್ಷದ ಅವಧಿಯಲ್ಲಿ ಎಷ್ಟು ಅನುದಾನ ತರಿಸಿದ್ದಾರೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ಸಲೀಮ್, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಅಪ್ಪಿ , ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಸಾಲ್ಯಾನ್, ಶಂಶುದ್ದೀನ್, ಅನಿಲ್ ಪೂಜಾರಿ, ಅಶ್ರಫ್ ಬಜಾಲ್, ಸಬಿತಾ ಮಿಸ್ಕಿತ್ ಇದ್ದರು.








