ಜನಾಕರ್ಷಣೆಗೆ ಕಾರಣವಾದ ಪಿಲಿಕುಳ ಮತ್ಸ್ಯೋತ್ಸವ, ಮೀನು ಆಹಾರ ಮೇಳ – 1600 ಕೆಜಿ ಮೀನು ಭರ್ಜರಿ ಮಾರಾಟ, 2 ಸಾವಿರಕ್ಕೂ ಅಧಿಕ ಜನರು ಭಾಗಿ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪಿಲಿಕುಳದ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು, ಪ್ರದರ್ಶಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಮತ್ಸ್ಯೋತ್ಸವ ಕಾರ್ಯಕ್ರಮ ಭಾನುವಾರ ನಡೆದಿದ್ದು, ಸಾರ್ವಜನಿಕರು, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು. ಅಂದಾಜು 2,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ಕೆರೆಗೆ ಬಿಟ್ಟಿದ್ದ ಮೀನುಗಳನ್ನು ಈ ವರ್ಷ ಹಿಡಿಯಲು ನುರಿತ ಮೀನುಗಾರರನ್ನು ಶಿವಮೊಗ್ಗದಿಂದ ಕರೆಸಲಾಗಿದ್ದು, ಒಟ್ಟು 1600 ಕೆಜಿಯಷ್ಟು ರೋಹು, ಕಾಟ್ಲಾ, ತೆಲಪಿಯ ಮೊದಲಾದ ಸಿಹಿನೀರಿನ ಮೀನುಗಳನ್ನು ಹಿಡಿದು, ಕೆಜಿಗೆ ತಲಾ 160 ರು. ದರದಲ್ಲಿ ಮಾರಾಟ ಮಾಡಲಾಯಿತು. 950 ಕೆಜಿ ಮೀನನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದ್ದರೆ, ಉಳಿದ ಮೀನನ್ನು ಕೆ.ಎಫ್.ಡಿ.ಸಿ.ಗೆ ಮಾರಾಟ ಮಾಡಲಾಯಿತು. ಜನರು ಮುಗಿಬಿದ್ದು ಮೀನು ಖರೀದಿಸುತ್ತಿದ್ದರು.

ಈ ಬಾರಿಯ ಮೇಳದಲ್ಲಿ ಪ್ರವಾಸಿಗರಿಗಾಗಿ ಸ್ಥಳದಲ್ಲೇ ಮೀನಿನ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವ ವಿಶೇಷ ಫುಡ್ ಫೆಸ್ಟ್ ಹಾಗೂ ಕೆ.ಎಫ್.ಡಿ.ಸಿ. ವತಿಯಿಂದ ಮೊಬೈಲ್ ಕ್ಯಾಂಟೀನ್ ಸೇವೆಯನ್ನು ಕೂಡ ವ್ಯವಸ್ಥೆಗೊಳಿಸಲಾಗಿತ್ತು.

ಕಾರ್ಯಕ್ರಮವನ್ನು ಮೂಲ್ಕಿ– ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮೀನುಗಳನ್ನು ಕೆರೆಗೆ ಬಿಡುವ ಮೂಲಕ ಉದ್ಘಾಟಿಸಿದರು. ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ ಮತ್ತು ಎನ್.ಜಿ. ಮೋಹನ್‌, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷ ಜಿ. ಶ್ರೀನಿಕೇತನ್‌, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜನರಲ್‌ ಮ್ಯಾನೆಜರ್ ಮಹೇಶ್ ಕುಮಾರ್‌ ಅತಿಥಿಗಳಾಗಿ ಭಾಗವಹಿಸಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಇದ್ದರು.

LEAVE A REPLY

Please enter your comment!
Please enter your name here