


ಮಂಗಳೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟ ಹೋರಾಟ ಮುಂದುವರಿಸಲಿದೆ. ಜತೆಗೆ ಮತದಾನದಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವಂತೆ ಕೂಡ ಧ್ವನಿಗೂಡಿಸಲಿದ್ದೇವೆ ಎಂದು ಎಐಸಿಸಿ ವೀಕ್ಷಕ ಹಾಗೂ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯ ಕಮಲೇಶ್ವರ ಪಟೇಲ್ ಹೇಳಿದ್ದಾರೆ.





ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಈಗಾಗಲೇ ಆರಂಭವಾಗಿರುವ ಕಾಂಗ್ರೆಸ್ ಜನಾಂದೋಲನವು ಸಂವಿಧಾನ ದಿನದವರೆಗೂ ಮುಂದುವರಿಯಲಿದೆ. ನ.1ರಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟ ಜತೆ ಸೇರಿಕೊಂಡು ಬೃಹತ್ ರ್ಯಾಲಿ ಹಾಗೂ ‘ದಿಲ್ಲಿ ಚಲೋ’ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಅಸಂವಿಧಾನಿಕ ಸರ್ಕಾರ ರಚನೆ:
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಸಂದರ್ಭ ವೋಟ್ ಚೋರಿ ಮೂಲಕ ಬಿಜೆಪಿ ಅನೈತಿಕ ಹಾಗೂ ಅಸಂವಿಧಾನಿಕ ರೀತಿಯಲ್ಲಿ ಸರ್ಕಾರಗಳನ್ನು ರಚಿಸುತ್ತಿದೆ ಎಂದು ಆರೋಪಿಸಿದ ಪಟೇಲ್, ‘ವೋಟ್ ಬಚಾವೋ- ದೇಶ್ ಬಚಾವೋ’ ಆಂದೋಲನವನ್ನು ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ‘ಇಂಡಿಯಾ’ ಮೈತ್ರಿಕೂಟದ ನಾಯಕರು ದೇಶಾದ್ಯಂತ ಆರಂಭಿಸಿದ್ದು, ಪ್ರಜಾತಂತ್ರವನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಎಸ್‌ಐಆರ್ ಮೂಲಕ ದೇಶಾದ್ಯಂತ ಒಟ್ಟು 13 ಕೋಟಿ 3 ಲಕ್ಷ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ ಒಟ್ಟು 6.5 ಲಕ್ಷ ಮತಗಳಲ್ಲಿ 1,02,500 ನಕಲಿ/ ಅಕ್ರಮ ಮತಗಳು ಪತ್ತೆಯಾಗಿವೆ. ಇದಲ್ಲದೆ, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮಬಂಗಾಳ ಸೇರಿದಂತೆ ಅನೇಕ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಇದೆಲ್ಲ ವೋಟ್ ಚೋರಿ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಎಂಎಲ್ಸಿ ಐವನ್ ಡಿಸೋಜ, ಮಾಜಿ ಸಚಿವ ಬಿ.ರಮಾನಾಥ ರೈ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಶಶಿಧರ್ ಹೆಗ್ಡೆ, ಬಿ.ಇಬ್ರಾಹಿಂ ಮತ್ತಿತರರು ಇದ್ದರು.








