


ಮಂಗಳೂರು: ಕಳಪೆ ಆಹಾರ ಪೂರೈಸಿದ ಆರೋಪದ ಮೇಲೆ ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್ಸಿ ಔಟ್ಲೆಟ್ನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.





ಅಧಿಕಾರಿಗಳ ಈ ಕ್ರಮವನ್ನು ಹಾಗೂ ದೂರು ನೀಡಿದ ಗ್ರಾಹಕರನ್ನು ಶ್ಲಾಘಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಇದರೊಂದಿಗೆ ಘನೀಕೃತ (ಫ್ರೋಜನ್) ಮಾಂಸ ಉತ್ಪನ್ನಗಳ ಮೇಲೆ ಸ್ಪಷ್ಟ ಲೇಬಲಿಂಗ್ ಕಡ್ಡಾಯಗೊಳಿಸುವ ಹೊಸ ನಿಯಮ ತರುವುದಾಗಿ ಹೇಳಿದ್ದಾರೆ.


ನಗರದ ನಿವಾಸಿ ಮಹಿಳೆಯೊಬ್ಬರು ಕೆಎಫ್ಸಿಯಿಂದ ಆನ್ಲೈನ್ ಮೂಲಕ ಶನಿವಾರ ಆಹಾರ ತರಿಸಿದ್ದರು. ಅದರಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅವರು ಅಧಿಕಾರಿಗಳಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಔಟ್ಲೆಟ್ನ್ನು ಸೀಲ್ ಮಾಡಿದ್ದಾರೆ. ಅಲ್ಲದೆ ಮುಂದಿನ ಕಾನೂನು ಕ್ರಮಕ್ಕಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸಾರ್ವಜನಿಕ ಸಹಭಾಗಿತ್ವಕ್ಕೆ ಖಾದರ್ ಶ್ಲಾಘನೆ:
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್, ಆಹಾರದಲ್ಲಿನ ದುರ್ವಾಸನೆ ಗ್ರಹಿಸಿ ದೂರು ನೀಡಿದ ಮಹಿಳೆಯನ್ನು ಅಭಿನಂದಿಸುತ್ತೇನೆ. ಇದು ಇತರ ಗ್ರಾಹಕರಿಗೂ ಪ್ರೇರಣೆಯಾಗಿದೆ. ಬೃಹತ್ ಪ್ರಮಾಣದಲ್ಲಿ ಬೆಳೆದಿರುವ ಆಹಾರ ಉದ್ಯಮವನ್ನು ನಿಯಂತ್ರಿಸಲು ನಮ್ಮ ಸಣ್ಣ ಇಲಾಖೆಗೆ ನಾಗರಿಕ ಸಮಾಜದ ಬೆಂಬಲ ಅಗತ್ಯ. ನಾವು ಸದಾ ಜನರೊಂದಿಗೆ ನಿಲ್ಲುತ್ತೇವೆ ಎಂದು ಖಾದರ್ ಹೇಳಿದರು.
ಹೊಸ ಲೇಬಲಿಂಗ್ ನಿಯಮ:
ಬಹುರಾಷ್ಟ್ರೀಯ ಸಂಸ್ಥೆಗಳು ಫ್ರೋಜನ್ ಮಾಂಸವನ್ನು ಸುದೀರ್ಘ ಅವಧಿಗೆ ಸಂಗ್ರಹಿಸಿಡುವ ಪದ್ಧತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವ ಖಾದರ್, ಗ್ರಾಹಕರಿಗೆ ತಾವು ಸೇವಿಸುವ ಆಹಾರದ ನಿಖರ ಅವಧಿಯನ್ನು ತಿಳಿದುಕೊಳ್ಳುವ ಹಕ್ಕಿದೆ. ಮಾಂಸವನ್ನು ಎಷ್ಟು ತಿಂಗಳುಗಳಿಂದ ಸಂಗ್ರಹಿಸಿಡಲಾಗಿದೆ ಎಂಬುದನ್ನು ಕಂಪೆನಿಗಳು ಸ್ಟಿಕ್ಕರ್ ಮೂಲಕ ಸ್ಪಷ್ಟವಾಗಿ ನಮೂದಿಸಬೇಕು. ಆಹಾರವನ್ನು ಸೇವಿಸಬೇಕೋ ಬೇಡವೋ ಎಂಬುದು ಗ್ರಾಹಕರ ನಿರ್ಧಾರವಾಗಿದ್ದರೂ, ಸಂಗ್ರಹಣೆಯ ನಿಖರ ಮಾಹಿತಿ ನೀಡುವುದು ಕಂಪೆನಿಗಳ ಕರ್ತವ್ಯ.
ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಹೊಟೇಲ್, ರೆಸ್ಟೋರೆಂಟ್ ಮತ್ತು ಮಲ್ಟಿನ್ಯಾಷನಲ್ ಔಟ್ಲೆಟ್ಗಳಲ್ಲಿ ಈ ತಪಾಸಣೆ ಮುಂದುವರಿಯಲಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಸೀಲ್ ಮಾಡಲಾದ ಔಟ್ಲೆಟ್ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.








