


ಮಂಗಳೂರು: ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಹೊಟೇಲ್, ಕ್ಯಾಂಟೀನ್‌ಗಳ ಬಳಿಕ ಈಗ ಪಿಜಿ ಸೆಂಟರ್‌ಗಳು, ಹಾಸ್ಟೆಲ್‌ಗಳು ಮತ್ತು ಕೇಟರಿಂಗ್ ಸಂಸ್ಥೆಗಳ ಮೇಲೆಯೂ ಶೀಘ್ರವೇ ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ತಪಾಸಣೆ ನಡೆಸಲಾಗುವುದು ಎಂದು ಯು.ಟಿ. ಖಾದರ್ ಹೇಳಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ತೊರೆದು ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಬರುವ ಯುವ ಜನರು ಮತ್ತು ವಿದ್ಯಾರ್ಥಿಗಳನ್ನು ಪಿಜಿ, ಹಾಸ್ಟೆಲ್ ಮಾಲೀಕರು ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ, ಶುಚಿಯಾದ ಹಾಗೂ ಆರೋಗ್ಯಕರ ಆಹಾರ-ವಸತಿ ಕಲ್ಪಿಸಬೇಕು. ಕಲುಷಿತ ಆಹಾರದಿಂದ ಆರೋಗ್ಯ ಸಮಸ್ಯೆ ಉಂಟಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸುರಕ್ಷತಾ ನಿಯಮಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳದಿದ್ದರೆ ಅಂತಹ ಪಿಜಿಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ ಎಂದರು.


ಬಿಸಿ ನೀರು ಪೂರೈಕೆ ಕಡ್ಡಾಯ: ಸಾರ್ವಜನಿಕ ಸ್ಥಳಗಳು ಮತ್ತು ಹೊಟೇಲ್‌ಗಳಲ್ಲಿ ಬಿಸಿ ನೀರು ಪೂರೈಸಲು ಈಗಾಗಲೇ ಸೂಚಿಸಲಾಗಿದೆ. ಗ್ರಾಹಕರು ಕೋರಿದಲ್ಲಿ ಮಾತ್ರ ತಣ್ಣೀರು ನೀಡಬಹುದು ಎಂದು ಖಾದರ್ ಹೇಳಿದರು.


ದಾಳಿ ಮುಂದುವರಿಕೆ: ಸಣ್ಣ ಅಥವಾ ದೊಡ್ಡ ಸಂಸ್ಥೆ ಎನ್ನದೆ ರಾಜ್ಯಾದ್ಯಂತ ಅಶುಚಿತ್ವ ಹಾಗೂ ನಿಯಮ ಉಲ್ಲಂಘಿಸುವ ಆಹಾರ ಮಳಿಗೆಗಳ ಮೇಲೆ ದಾಳಿ ಮತ್ತು ತಪಾಸಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದ ಅವರು, ನ್ಯಾಯಾಲಯದಲ್ಲೂ ಸವಾಲು ಮಾಡಲು ಸಾಧ್ಯವಾಗದಂತಹ ಉನ್ನತ ದರ್ಜೆಯ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸಿಬ್ಬಂದಿ ನೇಮಕಾತಿ: ಆಹಾರ ಸುರಕ್ಷತಾ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಿ, ಖಾಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಶೀಘ್ರವೇ ಅನುಮೋದನೆ ಪಡೆಯಲಾಗುವುದು ಎಂದೂ ಯು.ಟಿ. ಖಾದರ್ ಹೇಳಿದರು.







