


ಮಂಗಳೂರು: ದ.ಕ. ಜಿಲ್ಲಾದ್ಯಂತ ಸೋಮವಾರ ನಾಗರಪಂಚಮಿ ಸಡಗರ. ದೇವಸ್ಥಾನ, ನಾಗಬನ, ನಾಗಕ್ಷೇತ್ರಗಳಲ್ಲಿ ದಿನವಿಡೀ ನಾಗರ ಪಂಚಮಿ ಆಚರಣೆ ಕಂಡುಬಂತು.





ಕುಡುಪು ಅನಂತಪದ್ಮನಾಭ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಮಾಣೂರು ಸುಬ್ರಾಯ ದೇವಸ್ಥಾನ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ- ಮಹಾವಿಷ್ಣು ದೇವಸ್ಥಾನ ಸೇರಿದಂತೆ ನಾಗ ಕ್ಷೇತ್ರಗಳಲ್ಲಿ ಬೆಳಗ್ಗಿನಿಂದಲೇ ಭಕ್ತಜನ ಸಾಗರ ಸೇರಿತ್ತು.


ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆ 4 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು. ಒಂದೇ ದಿನ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದರು. ನಾಗಬನದಲ್ಲಿ ನಾಗ ದೇವರಿಗೆ ಕ್ಷೇತ್ರದ ತಂತ್ರಿ ಹಾಗೂ ಅನುವಂಶಿಕ ಆಡಳಿತ ಮುಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮುಕ್ತೇಸರ ಹಾಗೂ ಅರ್ಚಕ ಕೆ. ಮನೋಹರ ಭಟ್ ಮುಂದಾಳತ್ವದಲ್ಲಿ ಪೂಜೆಗಳು ನಡೆದವು.
ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್, ಅನುವಂಶಿಕ ಮುಕ್ತೇಸರ ಹಾಗೂ ಅನುವಂಶಿಕ ಪವಿತ್ರ ಪಾಣಿ ಬಾಲಕೃಷ್ಣ ಕಾರಂತ, ಮುಕ್ತೇಸರ ಭಾಸ್ಕರ ಕೆ. ಹಾಗೂ ಪ್ರಮುಖರಾದ ಕೆ. ಕೃಷ್ಣರಾಜ ತಂತ್ರಿ, ಸುಜನ್ ದಾಸ್ ಕುಡುಪು, ಉದಯಕುಮಾರ್ ಕುಡುಪು, ವಾಸುದೇವ ರಾವ್ ಕುಡುಪು ಇದ್ದರು.
15 ಸಾವಿರ ತಂಬಿಲ ಸೇವೆ: ಕುಡುಪು ಕ್ಷೇತ್ರದಲ್ಲಿ ಸುಮಾರು 15000 ಸಾವಿರ ತಂಬಿಲ ಸೇವೆ ಹಾಗೂ 4000 ಸಾವಿರ ಪಂಚಾಮೃತ ಸೇವೆಗಳು ಭಕ್ತರಿಂದ ಅರ್ಪಣೆಗೊಂಡವು.








