


ಮಂಗಳೂರು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ವತಿಯಿಂದ ಕೆಸಿಸಿಐ ಕಾನ್ ಕ್ಲೇವ್ ನ 7ನೇ ಆವೃತ್ತಿಯು ನಗರದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜರುಗಿತು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆ- ರಾಜ್ಯಗಳ ಪ್ರಮುಖ ಉದ್ಯಮಿಗಳು, ನವೋದ್ಯಮಿಗಳು ಮತ್ತು ವೃತ್ತಿಪರರು ಭಾಗವಹಿಸಿದ್ದರು.


‘ಜಾಗತಿಕ ಆರೋಗ್ಯ ಕ್ಷೇತ್ರ’ ಕುರಿತ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಹಿದ್ದೀನ್, ಅಂತಾರಾಷ್ಟ್ರೀಯ ಸಹಭಾಗಿತ್ವ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯ ಉದ್ಯಮದ ಜಾಗತಿಕ ಬೆಳವಣಿಗೆಗೆ ಮುಖ್ಯ ಎಂದರು. ಎರಡನೇ ಗೋಷ್ಠಿಯಲ್ಲಿ ಎನ್ಆರ್ ಗ್ರೂಪ್ ನಿರ್ದೇಶಕ ಅರ್ಜುನ್ ರಂಗ ಅವರೊಂದಿಗೆ ಕೆಸಿಸಿಐ ಮಾಜಿ ಅಧ್ಯಕ್ಷ ಸಿಎ ಶ್ರೀನಿವಾಸ ಎಸ್. ಕಾಮತ್ ಸಂವಾದ ನಡೆಸಿದರು.


ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹಮದ್ ಮುದಸ್ಸರ್ ಮಾತನಾಡಿದರು. ಕೆಸಿಸಿಐ ಗೌರವ ಕಾರ್ಯದರ್ಶಿ ಜೀತನ್ ಅಲೆನ್ ಸಿಕ್ವೇರಾ ವಂದಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರು, ನಿರ್ದೇಶಕರು, ಪೋಷಕ ಸಂಸ್ಥೆಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಭಾರತ್ ಗ್ರೂಪ್, ಎಂಆರ್ಪಿಎಲ್ ಮತ್ತು ಗಾಡಿಯಾರ್ ಗ್ರೂಪ್ನ ಪ್ರತಿನಿಧಿಗಳು ಇದ್ದರು.










