ಕೂಲಿ ಕಾರ್ಮಿಕರನ್ನು ಭೂಮಾಲೀಕರನ್ನಾಗಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸು: ಟಿ.ಎಂ.ಶಹೀದ್ – ಜಿಲ್ಲಾ ಮಟ್ಟದ ದೇವರಾಜ ಅರಸು 111ನೇ ಜನ್ಮದಿನಾಚರಣೆ

ಮಂಗಳೂರು: ಬೆರಳೆಣಿಕೆಯಷ್ಟು ಮಂದಿ ಭೂಮಿಯ ಒಡೆತನ ಹೊಂದಿದ್ದ ಸಮಾಜದಲ್ಲಿ ಇಂದು ಸಾವಿರಾರು ಮಂದಿ ಭೂ ಮಾಲೀಕರಾಗಲು ಅಂದಿನ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ ದೂರದೃಷ್ಟಿ ಕಾರಣ ಎಂದು ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಮೀನಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಜನರು, ಭೂಮಿಯ ಮಾಲೀಕರಾಗುವ ಕನಸು ಕಾಣಲು ಕೂಡ ಸಾಧ್ಯವಿಲ್ಲದಂತಹ ಕಾಲಘಟ್ಟದಲ್ಲಿ ದೇವರಾಜು ಅರಸು ಅವರ ಆಡಳಿತ ಮತ್ತು ನೀತಿಯ ಫಲವಾಗಿ ಸಮಾಜದ ಅತ್ಯಂತ ಕೆಳಸ್ತರದಲ್ಲಿರುವವರಿಗೆ ಕೂಡ ಭೂಮಿಯ ಒಡೆತನ ದೊರೆಯಿತು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿ, ನಂದಿಕೂರು ಎಜ್ಯುಕೇಶನ್ ಟ್ರಸ್ಟ್ ಆಡಳಿತ ಅಧಿಕಾರಿ ಸಾಯಿನಾಥ್ ಶೆಟ್ಟಿ ಮುಂಡ್ಕೂರು ಮಾತನಾಡಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತ್ತು ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ದೇವರಾಜ ಅರಸು ಅಹರ್ನಿಶಿ ದುಡಿದವರು. ಭೂ ಒಡೆತನದಿಂದ ದುರ್ಬಲ ವರ್ಗದವರು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದುವಂತಾಯಿತು ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಜಯಲಕ್ಷ್ಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಕುಂತಲಾ ಮತ್ತಿತ್ತರರು ಇದ್ದರು.
ಇದೇ ಸಂದರ್ಭ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಸದ್ಭಾವನಾ ದಿನದ ಪ್ರತಿಜ್ಞೆ ಸ್ವೀಕರಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್. ನಾಯಕ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here