


ಮಂಗಳೂರು: ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಶಾಶ್ವತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯಿಸಿದ್ದಾರೆ.





ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅವರು ಕೃಷಿಕರ ಸಮಸ್ಯೆಗಳ ಕುರಿತು ಗಮನ ಸೆಳೆದರು.


ಹಳದಿ ಎಲೆ ಮತ್ತು ಎಲೆ ಚುಕ್ಕೆ ರೋಗದಿಂದಾಗಿ ಜಿಲ್ಲೆಯ ರೈತರು ಈಗಾಗಲೇ ಹೈರಾಣಾಗಿದ್ದಾರೆ. ಇದರ ನಡುವೆ ಕೃಷಿ ಭೂಮಿಗೆ ದಾಳಿ ಮಾಡಿ ಹಾನಿ ಉಂಟು ಮಾಡುತ್ತಿರುವ ಕಾಡಾನೆಗಳಿಂದ ತೀರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆನೆಗಳು ಕೃಷಿ ಭೂಮಿಗೆ ಪ್ರವೇಶಿಸುವುದನ್ನು ತಡೆಯಲು ಅರಣ್ಯ ಇಲಾಖೆ ಸೌರ ಬೇಲಿಯನ್ನು ಅಳವಡಿಸಬೇಕು. ಈ ಯೋಜನೆಗಾಗಿ ಇರುವ ಶೇ.50 ಸಹಾಯಧನ ಯೋಜನೆಯನ್ನು ಕೈಬಿಟ್ಟು ಸರ್ಕಾರವೇ ಸಂಪೂರ್ಣ ಮೊತ್ತ ಭರಿಸಿ ಸೌರ ಬೇಲಿ ನಿರ್ಮಿಸಬೇಕು ಎಂದು ಭಾಗೀರಥಿ ಮುರುಳ್ಯ ಹೇಳಿದರು.
ಇದಕ್ಕೆ ಉತ್ತರಿಸಿದ ಅರಣ್ಯ ಅಧಿಕಾರಿ, ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಅನುಮೋದನೆ ಬಂದಿಲ್ಲ. ದಕ್ಷಿಣ ಕನ್ನಡದಲ್ಲಿ ಪ್ರಸ್ತುತ 25 ಸಿಬ್ಬಂದಿಯನ್ನು ಒಳಗೊಂಡ ಆನೆ ಕಾರ್ಯಪಡೆ ಕಾರ್ಯ ನಿರ್ವಹಿಸುತ್ತಿದ್ದು, ಆನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಗಳು ನಡೆಯುತ್ತಿವೆ. 2026-27ನೇ ಸಾಲಿನಲ್ಲಿ ಆನೆಗಳಿಂದ ಬೆಳೆ ನಷ್ಟವಾದ 19 ಜನರಿಗೆ ಪರಿಹಾರವಾಗಿ 3.30 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೊಳಗಾದ 381 ಜನರಿಗೆ 73 ಲಕ್ಷ ರು. ಪರಿಹಾರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ ಎಂದು ತಿಳಿಸಿದರು.
ಡಿಸಿಎಫ್ ಮತ್ತು ಸಿಸಿಎಫ್ ಜತೆ ಈ ವಿಷಯದ ಬಗ್ಗೆ ಚರ್ಚಿಸಿ ಆನೆಗಳ ಹಾವಳಿಯನ್ನು ನಿವಾರಿಸಲು ಶಾಶ್ವತ ಕ್ರಮಗಳನ್ನು ಅನ್ವೇಷಿಸುವುದಾಗಿ ಡಿಸಿ ದರ್ಶನ್ ಎಚ್.ವಿ. ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಮಂಗಳೂರು ಡಿಸಿಪಿ ಮಿಥುನ್ ಎಚ್.ಎನ್. ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ 80 ಆನೆಗಳಿಂದ ಬೆಳೆಹಾನಿ
ಜಿಲ್ಲಾದ್ಯಂತ ಸುಮಾರು 80 ಆನೆಗಳು ಬೆಳೆ ಹಾನಿಯಲ್ಲಿ ಭಾಗಿಯಾಗಿರುವುದನ್ನು ಗುರುತಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಆನೆಗಳ ದಾಳಿಯನ್ನು ತಡೆಗಟ್ಟುವ ಕ್ರಮವಾಗಿ ರೈತರಿಗೆ ಸೌರ ಬೇಲಿ ಅಳವಡಿಸಲು ಶೇ.50 ಸಬ್ಸಿಡಿ ನೀಡಲಾಗುತ್ತಿದೆ ಎಂದು ಹೇಳಿದರು.
————-
ಬಾಕ್ಸ್
ಏರ್ಪೋರ್ಟ್ ಬಳಿ ರೈಲು ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಸೂಚನೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲು ನಿಲ್ದಾಣ ಸ್ಥಾಪಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈಗ ಅಸ್ತಿತ್ವದಲ್ಲಿರುವ ಜೋಕಟ್ಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬಹುದು ಅಥವಾ ಹೊಸ ನಿಲ್ದಾಣಕ್ಕಾಗಿ ವಿಮಾನ ನಿಲ್ದಾಣದ ಬಳಿ ಸೂಕ್ತ ಸ್ಥಳ ಗುರುತಿಸಬಹುದು ಎಂದು ಅವರು ಸೂಚಿಸಿದರು.








