


ಮಂಗಳೂರು: ಕಲಾಸಾಧನ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಸೆ.6ರಂದು ಸಂಜೆ 5 ಗಂಟೆಗೆ ನಗರದ ಶ್ರೀರಾಮಕೃಷ್ಣ ಮಠದಲ್ಲಿ (ಶ್ರೀ ಮಂಗಳಾದೇವಿ ಬಳಿ) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮ ‘ರಾಗ ಸುಧಾ’ ಹಮ್ಮಿಕೊಳ್ಳಲಾಗಿದೆ.ಈ ಸಂಗೀತ ಸಂಭ್ರಮದಲ್ಲಿ ಗ್ವಾಲಿಯರ್ ಘರಾನಾ ಕಲಾಕಾರ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ, ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್, ಗ್ವಾಲಿಯರ್ ಕಿರಾಣಾ ಪದ್ಧತಿಯ ಗಾಯಕ ಮತ್ತು ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್, ಪಂಡಿತ್ ಮಾಣಿಕ್ ರಾವ್ ಅವರ ಶಿಷ್ಯ, ತಬಲಾ ವಾದಕ ಮತ್ತು ಗಾಯಕ ಅಕ್ಷಯ ಜೋಶಿ ಭಾಗವಹಿಸಲಿದ್ದಾರೆ.


ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬಳಿಕ ಗಣ್ಯರಿಂದ ಕಲಾವಿದರಿಗೆ ಸನ್ಮಾನ ನೆರವೇರಲಿದೆ. ಸಂಗೀತಾಸಕ್ತರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಲಾಸಾಧನ ಸಂಸ್ಥೆ ಕಳೆದ 10 ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತ ಪ್ರಚುರಪಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.


ಕಲಾವಿದರ ಪರಿಚಯ:
ಆದಿತ್ಯ ಮೋದಕ್:
ಬಾಲ್ಯದಲ್ಲಿ ಚಂದ್ರಕಾಂತ್ ಪಾರ್ಕರ್ ಅವರಿಂದ 5 ವರ್ಷ, ನಂತರ ಪ್ರದೀಪ್ ಧೋಂಡ್ ಅವರಿಂದ 4 ವರ್ಷ ಸಂಗೀತಾಭ್ಯಾಸ. ಗ್ವಾಲಿಯರ್ ಘರಾನಾ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ. ಪಂ. ರಾಮ ಮರಾಠೆ ಪುರಸ್ಕಾರ (ಪುಣೆ-2025), ಗಾನ್ ಯೋಗಿ ಪಂ. ಪಂಚಾಕ್ಷರಿ ಗವಾಯಿ ಪುರಸ್ಕಾರ (ಧಾರವಾಡ-2025), ಕೇಂದ್ರ ಸರ್ಕಾರದ ಪಂ. ವಸಂತರಾವ್ ದೇಶಪಾಂಡೆ ಪುರಸ್ಕಾರ (2016), ವೇದಿಕ್ ಹೆರಿಟೇಜ್ ಇಂಕ್ (ಯುಎಸ್ಎ-2008) ಅಂತರರಾಷ್ಟ್ರೀಯ ಸಂಗೀತ ಉತ್ಸವ ಗೌರವ, ಪಂ. ಸವಾಯಿ ಗಂಧರ್ವ ವಿದ್ಯಾರ್ಥಿವೇತನ, ಪಂ. ಭೀಮಸೇನ ಜೋಶಿ ವಿದ್ಯಾರ್ಥಿವೇತನ, ರಾಷ್ಟ್ರೀಯ ವಿದ್ಯಾರ್ಥಿವೇತನ ಹಾಗೂ ರಂಗಸ್ವರ್ ಮುಂಬೈ ಆಯೋಜಿಸಿದ್ದ ವೈ.ಬಿ. ಚವಾಣ್ ಕೇಂದ್ರ ಕಾರ್ಯಕ್ರಮ (2010) ದಲ್ಲಿ ಭಾಗವಹಿಸಿರುವ ಮೇರು ಕಲಾವಿದ.
ಸತೀಶ್ ಭಟ್ ಹೆಗ್ಗಾರ್:
ಸೂರ್ಯಕಲಾ ಭಟ್ ಮತ್ತು ಶ್ರೀಧರ್ ಭಟ್ ಅವರ ಪುತ್ರ. ಪ್ರಾಥಮಿಕ ಅಭ್ಯಾಸ ಜಾನಕಿ ಭಟ್ ಅವರಲ್ಲಿ ಆರಂಭಿಸಿ, ನಂತರ ವಿದ್ವಾನ್ ಗಣಪತಿ ಹೆಗಡೆ ಯಲ್ಲಾಪುರ ಅವರಲ್ಲಿ ಕಳೆದ 18 ವರ್ಷಗಳಿಂದ ಗ್ವಾಲಿಯರ್ ಕಿರಾಣಾ ಪದ್ಧತಿಯಲ್ಲಿ ಅಭ್ಯಾಸ. ಕರ್ನಾಟಕ ಕಾಲೇಜು ಧಾರವಾಡದಲ್ಲಿ ಬಿ.ಮ್ಯೂಸಿಕ್ ಪದವಿ. ಹಾರ್ಮೋನಿಯಂ ಸ್ವತಂತ್ರ ವಾದನ ಕಾರ್ಯಕ್ರಮ ನೀಡುತ್ತಿದ್ದು, CCRT ದೆಹಲಿಯ ನ್ಯಾಷನಲ್ ಸ್ಕಾಲರ್ಶಿಪ್ ಪಡೆದಿದ್ದಾರೆ. ಪುಣೆ, ಮುಂಬೈ, ದೆಹಲಿ, ಪಂಜಾಬ್, ಅಯೋಧ್ಯಾ, ಒರಿಸ್ಸಾ, ಹೈದರಾಬಾದ್, ಚೆನ್ನೈ, ಕೇರಳ, ಗೋವಾ, ನಾಗಪುರ ಸೇರಿ ದೇಶದ ಹಲವೆಡೆ ಕಾರ್ಯಕ್ರಮ ನೀಡಿದ್ದಾರೆ. ‘ಗಾನಯೋಗಿ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಅಕ್ಷಯ ಜೋಶಿ:
ಪಂಡಿತ್ ಮಾಣಿಕ್ ರಾವ್ ಗೋನ್ವಾರ್ ಅವರ ಶಿಷ್ಯರಾಗಿ ಪ್ರಸ್ತುತ ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಹಾಗೂ ಪಂಡಿತ್ ರಘುನಾಥ್ ನಕೋಡ್ ಅವರಿಂದ ಸಂಗೀತ ಕಲಿಯುತ್ತಿದ್ದಾರೆ. ತಬಲಾ ಸೋಲೋ ಜೊತೆಗೆ ಗಾಯನ, ವಾದ್ಯ ಸಂಗೀತ, ಜುಗಲ್ಬಂದಿ ಮತ್ತು ಫ್ಯೂಷನ್ ಕಾರ್ಯಕ್ರಮಗಳಿಗೆ ಪಕ್ಕವಾದ್ಯ ನುಡಿಸುತ್ತಾರೆ. ಕರ್ನಾಟಕ ವಿವಿ ಧಾರವಾಡದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ, ಬಿವಿವಿಎಸ್ ಬಾಗಲಕೋಟೆಯ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ, ಪಂ. ಜಯತೀರ್ಥ ಮೇವುಂಡಿ ಆಯೋಜಿಸಿದ್ದ ಹುಬ್ಬಳ್ಳಿ, ಇಳಕಲ್ ಮತ್ತು ಧಾರವಾಡದ ‘ಸ್ವರತೀರ್ಥ’ ಉತ್ಸವ, ಕೇರಳದ ಪಯ್ಯನೂರಿನ ‘ತುರಿಯಮ್’ ಉತ್ಸವ, ಅಮೆರಿಕದ ‘ಲೀಪ್ ಇಯರ್ ಆಫ್ ಫೇಯ್ತ್’ ಆಲ್ಬಮ್ಗೆ ತಬಲಾ ವಾದನ, ಮೈಸೂರು ದಸರಾ 2023ರಲ್ಲಿ ತಬಲಾ ಸೋಲೋ ಪ್ರದರ್ಶನ ನೀಡಿದ್ದಾರೆ.









