


ಮಂಗಳೂರು: ಮೀನುಗಾರಿಕೆ ಬಂದರಿನ ಸಮೀಪ ಇರುವ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಸಂಜೆ ಎರಡು ಮೀನುಗಾರಿಕಾ ಟ್ರಾಲ್ ಬೋಟ್ ಗಳು ಮುಳುಗಿದ್ದು, ಎರಡೂ ದೋಣಿಯಲ್ಲಿದ್ದ ಎಲ್ಲಾ 10 ಮಂದಿ ಮೀನುಗಾರರನ್ನು ಇತರ ಬೋಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.





‘ಮರ್ಮೇಡ್ II’ ಬೋಟ್ ಉಳ್ಳಾಲದ ಆಲೇಕಲದ ಶರೀಫ್ ಎಂಬವರಿಗೆ ಸೇರಿದ್ದರೆ, ‘ಅನಿಕ್’ ಬೋಟ್ ಕೂಳೂರಿನ ಬೆಂಗ್ರೆ ಕಸಬಾದ ಅಬೂಬಕ್ಕರ್ ಅಜ್ಮಲ್ ಅವರಿಗೆ ಸೇರಿದ್ದಾಗಿದೆ.


ಇವೆರಡೂ ಮರದ ಬೋಟ್ ಗಳಾಗಿದ್ದು, ಮಂಗಳವಾರ ಸಂಜೆ ವೇಳೆಗೆ ತಲಾ ಐದು ಮಂದಿ ಸಿಬ್ಬಂದಿಯೊಂದಿಗೆ ಮೀನುಗಾರಿಕಾ ಬಂದರಿನಿಂದ ಸಮುದ್ರಕ್ಕೆ ಇಳಿದಿದ್ದವು. ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿದ್ದರಿಂದ ತೊಂದರೆಗೆ ಸಿಲುಕಿದ ದೋಣಿಗಳು ನೀರಿನಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ ಮುಳುಗುತ್ತಿದ್ದುದನ್ನು ಗಮನಿಸಿದ ಇತರ ದೋಣಿಗಳಲ್ಲಿದ್ದ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿ, ಎರಡೂ ದೋಣಿಗಳಲ್ಲಿದ್ದ ಎಲ್ಲ 10 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಮುಳುಗಿದ ದೋಣಿಗಳಲ್ಲಿ ಒಂದನ್ನು ನಂತರ ಮೀನುಗಾರರು ದಡದತ್ತ ಎಳೆದುತಂದಿದ್ದಾರೆ. ಆದರೆ, ಎರಡನೇ ದೋಣಿಯನ್ನು ಎಳೆಯಲು ಬಳಸಿದ ಹಗ್ಗವು ಕಾರ್ಯಾಚರಣೆ ಸಮಯದಲ್ಲಿ ತುಂಡಾಗಿದ್ದರಿಂದ ಆ ದೋಣಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.








