ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ಪಾಲಕ್ಕಾಡ್‌- ಮೈಸೂರು ವಿಭಾಗೀಯ ಅಧಿಕಾರಿಗಳ ಸಮನ್ವಯ ಸಭೆ – ಅಕ್ಟೋಬರ್ 1ರಿಂದ ನೂತನ ವ್ಯಾಪ್ತಿ ಬದಲಾವಣೆ ಜಾರಿಗೆ

​ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ಪ್ರದೇಶದ ಆಡಳಿತಾತ್ಮಕ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ರೈಲ್ವೆ ವಿಭಾಗೀಯ ಪ್ರಬಂಧಕರು ಹಾಗೂ ಹಿರಿಯ ಅಧಿಕಾರಿಗಳ ಸಮನ್ವಯ ಸಭೆ ಮಂಗಳೂರಿನಲ್ಲಿ ಶುಕ್ರವಾರ ನಡೆಯಿತು.

ರೈಲ್ವೆ ಮಂಡಳಿಯ ಸೂಚನೆಯಂತೆ ಅಕ್ಟೋಬರ್ 1ರಿಂದ ಈ ನೂತನ ವ್ಯಾಪ್ತಿ ಬದಲಾವಣೆಯು ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರದ ವಿವಿಧ ಮಗ್ಗಲುಗಳು ಮತ್ತು ಅಗತ್ಯ ಏರ್ಪಾಡುಗಳ ಕುರಿತು ವಿವರವಾದ ಚರ್ಚೆ ನಡೆಯಿತು.
​ರೈಲು ಕಾರ್ಯಾಚರಣೆ ಹಾಗೂ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಸುಗಮವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಎರಡೂ ವಿಭಾಗಗಳ ಮುಖ್ಯ ಆದ್ಯತೆಯಾಗಿದೆ. ಅ.1ರಿಂದ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಸಿದ್ಧತೆಗಳು ಹಾಗೂ ಸಮನ್ವಯ ಕ್ರಮಗಳನ್ನು ಮುಂಚಿತವಾಗಿಯೇ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ, ಆಡಳಿತಾತ್ಮಕ ಬದಲಾವಣೆಯಿಂದ ಆಸ್ತಿಗಳು, ದಾಖಲೆಗಳು, ಕಾರ್ಯಾಚರಣೆಯ ನಿಯಂತ್ರಣ ವ್ಯವಸ್ಥೆ ಮತ್ತು ಸಿಬ್ಬಂದಿ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು.
ಸಿಬ್ಬಂದಿಗೆ ವರ್ಗಾವಣೆ ಅವಕಾಶ:
​ಮಂಗಳೂರು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವರ್ಗಾವಣೆಗೆ ಸಂಬಂಧಿಸಿದಂತೆ, ರೈಲ್ವೆ ಮಂಡಳಿಯ ನಿಯಮಾವಳಿ ಪ್ರಕಾರ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈರುತ್ಯ ರೈಲ್ವೆಗೆ ಸೇರ್ಪಡೆಯಾಗಲು ಸಿಬ್ಬಂದಿಗೆ ಐಚ್ಛಿಕ ಅವಕಾಶ ನೀಡಲಾಗುವುದು. ನಾನ್‌-ಗೆಜೆಟೆಡ್ ಸಿಬ್ಬಂದಿಯನ್ನು “ಇದ್ದಲ್ಲಿಯೇ ಇದ್ದಂತೆ” ಆಧಾರದ ಮೇಲೆ ವರ್ಗಾಯಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇತರ ವರ್ಗದ ಸಿಬ್ಬಂದಿಗೂ ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here