ಅಡಕೆ ಹಾಳೆತಟ್ಟೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಒತ್ತಾಯ – ಎಫ್.ಡಿ.ಎ. ನಿಷೇಧದಿಂದ ಉದ್ಯಮಕ್ಕೆ ಪೆಟ್ಟು, ಹಾನಿಕಾರಕ ವಸ್ತುಗಳು ಇಲ್ಲದಿರುವುದು ಪರೀಕ್ಷೆಯಿಂದ ಪತ್ತೆ

ಮಂಗಳೂರು: ಅಡಕೆ ಮರದ ಹಾಳೆಯಿಂದ ತಯಾರಿಸಿದ ಊಟದ ತಟ್ಟೆಗಳು ಮತ್ತು ಇತರ ವಸ್ತುಗಳ ವಿರುದ್ಧ ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್.ಡಿ.ಎ.) ಕೈಗೊಂಡ ನಿಷೇಧ ಕ್ರಮದ ಕುರಿತು ಪಾರದರ್ಶಕ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸುವಂತೆ ‘ಅಗ್ರಿಲೀಫ್’ ಸಂಸ್ಥಾಪಕ ಅವಿನಾಶ್ ರಾವ್ ಮತ್ತು ವಿಜ್ಞಾನಿ ಡಾ. ಗೋಪಾಲ್ ಮರಾಠೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಹಾಳೆಯಿಂದ ತಯಾರಿಸಿದ ಪಾತ್ರೆಗಳನ್ನು ಬಳಸುವಾಗ ಅದರಲ್ಲಿರುವ ಅರೆಕೊಲಿನ್, ಅರೆಕೈಡಿನ್, ಗುವಾಕೊಲಿನ್ ಮತ್ತು ಗುವಾಸಿನ್ ಎಂಬ ನಾಲ್ಕು ನೈಸರ್ಗಿಕ ಆಲ್ಕಲಾಯ್ಡ್‌ಗಳು ಆಹಾರಕ್ಕೆ ಸೇರಿಕೊಳ್ಳಬಹುದು ಎಂದು ವರದಿಯಾದ ನಂತರ, ಎಫ್.ಡಿ.ಎ.ಯು 2025ರ ಮೇ 8ರಂದು ಇವುಗಳನ್ನು ‘ಆಮದು ಎಚ್ಚರಿಕೆ 23-15’ ಅಡಿಯಲ್ಲಿ ಸೇರಿಸಿದೆ. ಈ ನಿಷೇಧದ ಪರಿಣಾಮ ಅಡಕೆ ಹಾಳೆಯ ತಟ್ಟೆಗಳು ಮತ್ತು ಇತರ ಪಾತ್ರೆಗಳ ಉತ್ಪಾದನೆಯಲ್ಲಿ ತೊಡಗಿರುವ ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ಉತ್ಪಾದನಾ ಘಟಕಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಎಂದು ತಿಳಿಸಿದರು.

ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಮತ್ತು ಜೈವಿಕ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರೂ ಆಗಿರುವ ಡಾ. ಮರಾಠೆ ಅವರ ಮಾರ್ಗದರ್ಶನದಲ್ಲಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಮಣಿಪಾಲದ ಮಾಹೆ ಲೈಫ್ ಸೈನ್ಸಸ್ ಮತ್ತು ಬೆಂಗಳೂರಿನ ಗ್ಲಿಮೆಟೊಮಿಕ್ಸ್ ಸೇರಿದಂತೆ ವಿವಿಧ ವೈಜ್ಞಾನಿಕ ಸಂಸ್ಥೆಗಳು ಹಾಗೂ ತಜ್ಞರ ಸಂಘಟನೆಗಳ ಸಹಯೋಗದೊಂದಿಗೆ ಈ ಕುರಿತು ಅಧ್ಯಯನ ನಡೆಸಲಾಯಿತು. ಅಧ್ಯಯನದ ವೇಳೆ ಪರೀಕ್ಷಿಸಲಾದ ‘ಅಗ್ರಿಲೀಫ್’ ಉತ್ಪನ್ನಗಳ ಮಾದರಿಗಳಲ್ಲಿ ಕಂಡುಬಂದ ಆಲ್ಕಲಾಯ್ಡ್‌ಗಳ ಮಟ್ಟವು, ಎಫ್.ಡಿ.ಎ. ಉಲ್ಲೇಖಿಸಿದ ಅಧ್ಯಯನದಲ್ಲಿ ವರದಿಯಾದ ಉತ್ಪನ್ನಗಳ ಮಟ್ಟಕ್ಕಿಂತ ಕಡಿಮೆಯಿತ್ತು. ಅನುಸರಿಸಲಾದ ಪರೀಕ್ಷಾ ವಿಧಾನಗಳಲ್ಲಿ, ಪರೀಕ್ಷಿಸಿದ ಅಡಕೆ ಹಾಳೆಯ ಉತ್ಪನ್ನಗಳಲ್ಲಿ ಯಾವುದೇ ಹಾನಿಕಾರಕ ವಸ್ತುಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು.

ಯುಎಸ್ ಎಫ್.ಡಿ.ಎ. ಮತ್ತು ಇತರ ನಿಯಂತ್ರಕ ಸಂಸ್ಥೆಗಳ ಮುಂದೆ ವಿಶ್ವಾಸಾರ್ಹ ವೈಜ್ಞಾನಿಕ ಸಾಕ್ಷ್ಯಗಳನ್ನು ಮಂಡಿಸಲು ಭಾರತ ಸರ್ಕಾರ, ಸಂಶೋಧಕರು, ಉದ್ಯಮ ಸಂಘಗಳು ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಸಹಕರಿಸಲು ನಾವು ಬದ್ಧರಾಗಿದ್ದೇವೆ ಎಂದು ಅವಿನಾಶ್ ರಾವ್ ಹೇಳಿದರು.

LEAVE A REPLY

Please enter your comment!
Please enter your name here