ಮಡಿಯಾಲದಲ್ಲಿ ಶೀಘ್ರ ಎಐ ಅಧ್ಯಯನ ಕೇಂದ್ರ: ಸದ್ಗುರು ಮಧುಸೂದನ ಸಾಯಿ – ಮಂಗಳೂರಿನಲ್ಲಿ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಘೋಷಣೆ – ನವೆಂಬರ್ ನಲ್ಲಿ ಅಧ್ಯಯನ ಕೇಂದ್ರ ಕಾರ್ಯಾರಂಭ, ಮುಂದಿನ ವರ್ಷ ವಿದ್ಯಾರ್ಥಿಗಳ ಸೇರ್ಪಡೆ

ಮಂಗಳೂರು: ಲೋಕಸೇವಾ ವೃಂದದ ಸಂಸ್ಥಾಪಕ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ ಮಾಡಲಿದೆ. 2027ರ ಜೂನ್ ನಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು “ಒನ್‌ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್” ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಘೋಷಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿ ಉಲ್ಲಾಸ್ ಕಾಮತ್ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ. ಈ ಉನ್ನತ ಶಿಕ್ಷಣ ಕೇಂದ್ರ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಅಧೀನದಲ್ಲಿ ಬರುತ್ತದೆ ಎಂದು ವಿವರಿಸಿದರು.

ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್‌ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು.

ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ಸೈನ್ಸ್‌ ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ. ಅಧ್ಯಾತ್ಮವನ್ನು ತನ್ನ ಕಾರ್ಯ ಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಮಧುಸೂದನ ಸಾಯಿ ಹೇಳಿದರು.

ಮಂಗಳೂರಿಗೆ ಬರಲು ಏಕಿಷ್ಟು ತಡವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನವರಿಗೆ ಕೊಡಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಿದ್ದೆ. ಈಗ ಮಡಿಯಾಲದಲ್ಲಿ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭವಾಗುತ್ತಿದೆ. ಈ ಕೊಡುಗೆ ಕೊಡುವ ಅವಕಾಶದೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.

ಸಿಎಸ್‌ಆರ್‌ ಫಂಡ್‌ಗಳ ಸಮರ್ಪಕ ಬಳಕೆ ಆಗಬೇಕು ಎಂದು ಅಭಿಪ್ರಾಯಪಟ್ಟ ಮಧುಸೂದನ ಸಾಯಿ, ಸರ್ಕಾರಕ್ಕೆ ತೆರಿಗೆಯ ಮೇಲೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಸಿಎಸ್‌ಆರ್‌ ನಿಧಿಯ ಮೇಲೆ ಹಕ್ಕು ಇರಬೇಕು. ಈ ಹಕ್ಕನ್ನು ಯಾರೂ ನಿರಾಕರಿಸಬಾರದು ಎಂದು ಕಿವಿಮಾತು ಹೇಳಿದರು.

ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ:

ಮೂಡುಬಿದಿರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರಿಗೆ “ಒನ್‌ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್” ವತಿಯಿಂದ ಸದ್ಗುರು ಮಧುಸೂದನ ಸಾಯಿ ಅವರು ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಿದರು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ ಚಂದ್ರ ಸೇರಿದಂತೆ ಹಲವು ಗಣ್ಯರು ಇದ್ದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎನ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಗೌಡ ಬಿರಾದಾರ್ ನಿರೂಪಿಸಿದರು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ಅನುಭವ ಹಂಚಿಕೊಂಡರು.

———–

ಬಾಕ್ಸ್-1

ಮಂಗಳೂರಿನಲ್ಲಿ ಶೀಘ್ರ ಉಚಿತ ಆಸ್ಪತ್ರೆ ಆರಂಭ

ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂಥ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು ಎಂದು ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.

ಪ್ರಸ್ತುತ ಕರ್ನಾಟಕದಲ್ಲಿ 15 ಜಿಲ್ಲೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಸಾಯಿಶ್ಯೂರ್‌ ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here