


ಮಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕೆಆರ್ಐಡಿಎಲ್ ಸಂಸ್ಥೆಯಲ್ಲಿ ಬಿಲ್ ಪಾಸ್ ಮಾಡಲು ಶೇ.7 ಕಮಿಷನ್ ಪಡೆಯಲಾಗುತ್ತಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಚಾರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಆಡಳಿತ- ವಿಪಕ್ಷ ಶಾಸಕರ ನಡುವೆ ಭಾರೀ ವಾಕ್ಸಮರ, ಕೋಲಾಹಲಕ್ಕೆ ಕಾರಣವಾಯಿತು.





ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಆಡಳಿತ ಪಕ್ಷದ ಶಾಸಕರೇ ಲಂಚಾವತಾರದ ಬಗ್ಗೆ ಆರೋಪ ಮಾಡಿರುವಾಗ ಇತರ ಕಾಮಗಾರಿಗಳ ಗತಿಯೇನು ಎಂದು ಆಕ್ಷೇಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಲಘುವಾಗಿ ಪರಿಗಣಿಸುವುದು ಬೇಡ ಎಂದರು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿ, ಇಲಾಖೆ ಮಟ್ಟದಲ್ಲಿ ತನಿಖೆ ನಡೆಸುವುದು ಕಣ್ಣೊರೆಸುವ ತಂತ್ರ ಮಾತ್ರ, ಇದರಿಂದ ನ್ಯಾಯ ಸಿಗದು. ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.


ಶೇ.60 ಕಮಿಷನ್ ಆರೋಪ- ಸಭೆಯಲ್ಲಿ ಕೋಲಾಹಲ:
ಈ ವೇಳೆ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಅದೇ ಪಕ್ಷದ ಶಾಸಕ ಬಯಲಿಗೆ ಎಳೆದಿದ್ದಾರೆ. ಅವ್ಯವಹಾರ ಆರೋಪದ ಕುರಿತು ಸಮಗ್ರ ತನಿಖೆಯಾಗಬೇಕು. ಈ ಸರ್ಕಾರ 60 ಪರ್ಸೆಂಟ್ ಸರ್ಕಾರ ಅಲ್ಲ ಅಂತ ಸಾಬೀತು ಮಾಡಬೇಕಾದರೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಹೇಳಿದಾಗ ಇಡೀ ಸಭೆ ರಾಜಕೀಯ ಕೆಸರೆರಚಾಟಕ್ಕೆ, ಆಡಳಿತ- ವಿಪಕ್ಷ ಶಾಸಕರ ಮಾತಿನ ಚಕಮಕಿಗೆ ಕಾರಣವಾಯಿತು.
‘ಮಕ್ಕಳಾಟಿಕೆ’ ಪದಪ್ರಯೋಗ, ಮತ್ತೆ ವಾಕ್ಸಮರ:
ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದಾಗ ಬಿಜೆಪಿ ಶಾಸಕರನ್ನು ಉದ್ದೇಶಿಸಿ ಸಚಿವ ಯು.ಟಿ. ಖಾದರ್ “ಇದು ಮಕ್ಕಳಾಟಿಕೆ ಅಲ್ಲ, ನಿಯಮಾವಳಿ ಪ್ರಕಾರ ಸಭೆ ನಡೆಯಬೇಕು” ಎಂದರು. ಇದರಿಂದ ಶಾಸಕರಾದ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ತೀವ್ರ ಆಕ್ರೋಶಗೊಂಡು ಮತ್ತೆ ಸಭೆ ಗೊಂದಲದ ಗೂಡಾಯಿತು. “ಭ್ರಷ್ಟಾಚಾರ ಪ್ರಶ್ನಿಸಿದರೆ ಮಕ್ಕಳಾಟಿಕೆಯಾ? ಹೀಗೆ ಹೇಳಿ ನಮ್ಮ ಧ್ವನಿ ಅಡಗಿಸಲಾಗದು” ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಮಾತನಾಡಿದ ಸಚಿವ ಯು.ಟಿ. ಖಾದರ್, ಕೇವಲ ಆರೋಪಗಳ ಆಧಾರದ ಮೇಲೆ ನಾವು ಅಧಿಕಾರಿಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ. ಆರೋಪ ಸಾಬೀತಾಗುವವರೆಗೆ ಅಧಿಕಾರಿಗಳ ಮೊರಾಲಿಟಿ ಕಡಿಮೆ ಮಾಡಲಾಗದು. ಈ ಆರೋಪಗಳ ಬಗ್ಗೆ ಕೂಲಂಕಶ ತನಿಖೆಯ ಅಗತ್ಯವಿದೆ. ಆದ್ದರಿಂದಲೇ, ಶಾಸಕರು ಮುಖ್ಯಮಂತ್ರಿಗೆ ದೂರು ನೀಡಿದ ತಕ್ಷಣ ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದೆ. ಈಗ ಇಲಾಖಾ ತನಿಖೆ ನಡೆಯುತ್ತಿದೆ, ಇದರ ವರದಿ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ, ಬಿಜೆಪಿ ಶಾಸಕರ ಬೇಡಿಕೆಯನ್ನು ಉಲ್ಲೇಖಿಸಿ ಈ ಆರೋಪಗಳ ಕುರಿತು ಅತ್ಯುನ್ನತ ಮಟ್ಟದ ಸೂಕ್ತ ತನಿಖೆ ನಡೆಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ಸಚಿವ ಖಾದರ್ ಅವರು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಸೂಚಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ ಸಿಇಒ ವಿನಾಯಕ್ ನರ್ವಾಡೆ ಕಾರ್ಭಾರಿ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್, ಧನಂಜಯ್ ಸರ್ಜಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಹಾಲಿ ನ್ಯಾಯಾಧೀಶರಿಂದ ತನಿಖೆ ಅಗತ್ಯವಿಲ್ಲ: ಅಶೋಕ್ ರೈ
ಕೆಡಿಪಿ ಸಭೆಯಲ್ಲಿ ಕೆ.ಆರ್.ಐ.ಡಿ.ಎಲ್. ಅವ್ಯವಹಾರಗಳ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವ ಅಗತ್ಯತೆ ಇಲ್ಲ. ಆದರೆ ವಿರೋಧ ಪಕ್ಷದವರ ಬೇಡಿಕೆ ಪರಿಗಣಿಸಿ ಸರ್ಕಾರವೇನಾದರೂ ತನಿಖೆ ನಡೆಸಲು ಮುಂದಾದರೆ ನನ್ನ ಅಭ್ಯಂತರವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ಐಡಿಎಲ್ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಕಠಿಣ ಕ್ರಮಗಳಿಗೆ ಮುಂದಾಗಿದೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅಲ್ಲದೆ ಪ್ರತ್ಯೇಕ ತನಿಖಾ ಸಮಿತಿ ರಚಿಸಿದೆ. ಆದ್ದರಿಂದ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸುವ ಅವಶ್ಯಕತೆ ಇಲ್ಲ. ಆದರೂ ಬಿಜೆಪಿ ಶಾಸಕರು ಬೇಡಿಕೆಯಂತೆ ತನಿಖೆ ನಡೆಸಲು ತೀರ್ಮಾನಿಸಿದರೆ, ನನ್ನ ಅಭ್ಯಂತರವಿಲ್ಲ ಎಂದರು.








