ನಕಲಿ ಔಷಧ ಮಾರಾಟಗಾರರ ಮೇಲೆ ಕೊಲೆ/ ಕೊಲೆಯತ್ನ ಕ್ರಿಮಿನಲ್ ಕೇಸ್: ಕೇಂದ್ರಕ್ಕೆ ಸಚಿವ ಯು.ಟಿ. ಖಾದರ್ ಮನವಿ – ರಾಜ್ಯದಲ್ಲಿ ನಕಲಿ ಔಷಧ ಮಾರಾಟ ತಡೆಹಿಡಿಯಲಾಗಿದೆ, ಜನರಿಗೆ ಆತಂಕ ಬೇಡ  – ಶೀಘ್ರದಲ್ಲೇ ಅತ್ಯಾಧುನಿಕ ಟೆಸ್ಟಿಂಗ್ ಲ್ಯಾಬ್‌ ಸ್ಥಾಪನೆಗೆ ಚಿಂತನೆ

ಮಂಗಳೂರು: ನಕಲಿ ಔಷಧ ಮಾರಾಟಗಾರರಿಗೆ ಪ್ರಸ್ತುತ ಇರುವ ದಂಡ/ ಲೈಸೆನ್ಸ್ ರದ್ದು ನಿಯಮಗಳು ಸಾಲದು. ಇವರ ವಿರುದ್ಧ ಕೊಲೆ ಯತ್ನ ಅಥವಾ ಕೊಲೆ ಪ್ರಕರಣದಡಿ (ಸಿ.ಆರ್.ಪಿ.ಸಿ.) ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಸೇರಿದಂತೆ ವಿವಿಧೆಡೆ ಸುಮಾರು 5 ಕೋಟಿ ರು. ಅಧಿಕ ಮೌಲ್ಯದ ನಕಲಿ ಔಷಧ ಲೇಬಲಿಂಗ್ ಜಾಲವನ್ನು ರಾಜ್ಯ ಸರ್ಕಾರವೇ ಮೊದಲು ಪತ್ತೆ ಮಾಡಿದೆ. ಇತರ ರಾಜ್ಯಗಳಿಗೂ ಈ ಜಾಲ ಹಬ್ಬಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದ್ದರಿಂದ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಸಿಬಿಐ ಅಥವಾ ಕೇಂದ್ರ ಔಷಧ ತನಿಖಾ ಸಂಸ್ಥೆಯಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದರು.

ನಕಲಿ ಲೇಬಲ್ ಹೊಂದಿದ್ದ ಔಷಧ ಬ್ಯಾಚ್‌ಗಳನ್ನು ಆಸ್ಪತ್ರೆ/ ಮೆಡಿಕಲ್ ಶಾಪ್‌ಗಳಿಂದ ಹಿಂಪಡೆಯಲು ಈಗಾಗಲೇ ಆದೇಶಿಸಲಾಗಿದೆ ಹಾಗೂ ತಕ್ಷಣವೇ ವೆಬ್‌ಸೈಟ್ ಪೋರ್ಟಲ್‌ನಲ್ಲಿ ಅವುಗಳ ಲಾಗಿನ್ ಬ್ಲಾಕ್ ಮಾಡಲಾಗಿದೆ. ಇದರಿಂದ ರಾಜ್ಯದ ಯಾವುದೇ ಭಾಗದಲ್ಲಿ ಈ ಜಾಲದ ಮೂಲಕ ವೋಚರ್ ಜನರೇಟ್ ಮಾಡಲು ಸಾಧ್ಯವಿಲ್ಲ. ಜತೆಗೆ ಅನುಮಾನಾಸ್ಪದ ಬ್ಯಾಚ್‌ನ ಎಲ್ಲ ಔಷಧಿಗಳನ್ನು ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಿಂದ ಸಂಪೂರ್ಣವಾಗಿ ವಾಪಸ್ ಪಡೆಯಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಖಾದರ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಸರಬರಾಜಾಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಗೊಂದಲಕ್ಕೀಡಾಗಬಾರದು. ಜನರ ಜೀವದ ಜೊತೆ ಚೆಲ್ಲಾಟವಾಡುವ ಯಾವುದೇ ವ್ಯಕ್ತಿಯನ್ನು ಸರ್ಕಾರ ಕ್ಷಮಿಸುವುದಿಲ್ಲ, ತಪ್ಪಿತಸ್ಥರ ವಿರುದ್ಧ ‘ಶೂನ್ಯ ಸಹಿಷ್ಣುತೆ’ ಇರಲಿದೆ ಎಂದು ಸಚಿವರು ಭರವಸೆ ನೀಡಿದರು.

ಅತ್ಯಾಧುನಿಕ ಟೆಸ್ಟಿಂಗ್ ಲ್ಯಾಬ್‌:

ನಕಲಿ ಔಷಧಿಗಳನ್ನು ಪತ್ತೆ ಹಚ್ಚಲು ಹಾಗೂ ಔಷಧಗಳ ಗುಣಮಟ್ಟವನ್ನು ತ್ವರಿತವಾಗಿ ಪರೀಕ್ಷಿಸಲು ಅತ್ಯುನ್ನತ ಮಟ್ಟದ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸುವ ಬಗ್ಗೆ ಅಥವಾ ಖಾಸಗಿ ಸುಸಜ್ಜಿತ ಲ್ಯಾಬ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಜತೆಗೆ ಔಷಧ ನಿಯಂತ್ರಣಾಧಿಕಾರಿಗಳು ಯಾವುದೇ ಫ್ಯಾಕ್ಟರಿ, ಆಸ್ಪತ್ರೆ ಅಥವಾ ಮೆಡಿಕಲ್ ಶಾಪ್‌ಗಳಿಗೆ ದಿಢೀರ್ ಭೇಟಿ ನೀಡಿ, ರಾಂಡಮ್ ಆಗಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here