


ಮಂಗಳೂರು: ಉಪ್ಪಿನಂಗಡಿ ಗ್ರಾಪಂ ಪಿಡಿಒ ಅವರನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿ ಬಳಿಕ ಆರ್ಯಾಪು ಗ್ರಾಮ ಪಂಚಾಯ್ತಿಗೆ ವರ್ಗಾವಣೆ ಮಾಡಲಾಗಿದ್ದು, ಇದೀಗ ಮತ್ತೆ ಉಪ್ಪಿನಂಗಡಿ ಗ್ರಾಪಂಗೆ ಅವರನ್ನೇ ನಿಯೋಜಿಸಿದ್ದೇಕೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಕೆಡಿಪಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.





ಈ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಮೇಲೆ ಗ್ರಾಮಸ್ಥರಿಂದ ಅವ್ಯವಹಾರ ಆರೋಪವಿದ್ದು, ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.


ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ವಿನಾಯಕ ಕಾರ್ಭಾರಿ, ಪುತ್ತೂರು ತಾಲೂಕಿನಲ್ಲಿ 22 ಗ್ರಾಪಂ ಪೈಕಿ 9ರಲ್ಲಿ ಪಿಡಿಒಗಳ ಕೊರತೆ ಇದೆ. ಶೀಘ್ರದಲ್ಲೇ ಬೇರೆ ಪಿಡಿಒ ಅವರನ್ನು ಉಪ್ಪಿನಂಗಡಿ ಗ್ರಾಪಂಗೆ ನಿಯೋಜಿಸಲಾಗುವುದು ಎಂದರು.
ಕೋವಿ ಲೈಸನ್ಸ್ ನವೀಕರಣಕ್ಕೆ ಒತ್ತಾಯ:
ಆನೆ ಸೇರಿದಂತೆ ಕಾಡುಪ್ರಾಣಿ ಹಾವಳಿ ಕುರಿತು ಪ್ರಸ್ತಾಪಿಸಿದ ಕಿಶೋರ್ ಕುಮಾರ್, ಎಲ್ಲ ರೈತರ ಕೋವಿ ಲೈಸನ್ಸ್ ನವೀಕರಣ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲೆಯಲ್ಲಿ 8 ಸಾವಿರಕ್ಕಿಂತ ಅಧಿಕ ಕೋವಿ ಲೈಸನ್ಸ್ ಇದ್ದು, ಲೈಸನ್ಸ್ ರದ್ದು ಮಾಡಿದ ಸಂಖ್ಯೆ ನೂರೂ ದಾಟಿಲ್ಲ. ಆದರೂ ಈ ಹಿಂದೆ ಲೈಸನ್ಸ್ ರದ್ದು ಮಾಡಿದ ಪ್ರಕರಣಗಳನ್ನು ಮರು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಹೊಸ ಪಿಡಿಒ ನೇಮಕ:
ಕೆಡಿಪಿ ಸಭೆಯಲ್ಲಿ ಕಿಶೋರ್ ಕುಮಾರ್ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ 34- ನೆಕ್ಕಿಲಾಡಿ ಪಿಡಿಒ ರವಿಚಂದ್ರ ಯು. ಅವರನ್ನು ಉಪ್ಪಿನಂಗಡಿ ಗ್ರಾಪಂಗೆ ಹೆಚ್ಚುವರಿ ಪ್ರಭಾರದಲ್ಲಿ ನಿಯೋಜಿಸಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.








