ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಯಾವಾಗ ಸೇರಿಸ್ತೀರಿ?: ಬಿಜೆಪಿಗೆ ಎಂಎಲ್‌ಸಿ ಐವನ್ ಡಿಸೋಜ ಪ್ರಶ್ನೆ – ಕಾಂಗ್ರೆಸ್ ಸರ್ಕಾರ ತುಳುವಿಗೆ ಮಾನ್ಯತೆ ನೀಡಿ ಆಯ್ತು, ಇನ್ನು ಬಿಜೆಪಿಯವರು ಇಚ್ಛಾಶಕ್ತಿ ತೋರಿಸಲಿ – ಸಂಪುಟ ಸಭೆಯ ಮೂಲಕ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯಿಂದ ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಬದಲಿಸಿದ್ದೇವೆ

ಮಂಗಳೂರು: ರಾಜ್ಯ ಸರ್ಕಾರವು ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷಾ ಮಾನ್ಯತೆ ನೀಡುವ ಮೂಲಕ ಕೋಟ್ಯಂತರ ತುಳುವರ ಸ್ವಾಭಿಮಾನವನ್ನು ಎತ್ತಿಹಿಡಿದಿದೆ. ಈಗ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಂಸದರ ಮೇಲಿದೆ. ಯಾವಾಗ ನಿಮ್ಮ ಕರ್ತವ್ಯವನ್ನು ನಿಭಾಯಿಸ್ತೀರಿ? ತಕ್ಷಣ ಈ ಕುರಿತು ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ನಾನು ವಿಧಾನ ಪರಿಷತ್ತಿಗೆ ಬಂದಾಗಲೇ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಶ್ನೆ ಎತ್ತಿದ್ದೆ. ಈಗಾಗಲೇ ರಾಜ್ಯ ಸರ್ಕಾರ ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಕರಾವಳಿಯ ಬಿಜೆಪಿ ಸಂಸದರು, ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಈ ಸವಾಲನ್ನು ಸ್ವೀಕರಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯನ್ನು ‘ಟೂರಿಂಗ್ ಟಾಕೀಸ್’ ಹಾಗೂ ‘ಸಚಿವರು ಮೀನು ತಿನ್ನಲು, ಮಜಾ ಮಾಡಲು ಹೋಗಿದ್ದರು’ ಎಂದು ಟೀಕಿಸಿದ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಐವನ್ ಡಿಸೋಜ, ಕರಾವಳಿಗೆ ₹32,611.11 ಕೋಟಿ ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದನ್ನು ಸಹಿಸಲಾಗದೆ ಬಿಜೆಪಿಗೆ ಹೊಟ್ಟೆಯುರಿ ಪ್ರಾರಂಭವಾಗಿದೆ ಎಂದರು.

ಈಗ ಅಭಿವೃದ್ಧಿಯ ಪ್ರಯೋಗಶಾಲೆ:

ಕರಾವಳಿಯನ್ನು ಬಿಜೆಪಿ ನಾಯಕರು ‘ಕೋಮುವಾದದ ಪ್ರಯೋಗಶಾಲೆ’ಯನ್ನಾಗಿ ಮಾಡಿಕೊಂಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಈಗ ‘ಅಭಿವೃದ್ಧಿಯ ಪ್ರಯೋಗಶಾಲೆ’ಯನ್ನಾಗಿ ಬದಲಾಯಿಸಿದೆ ಎಂದು ತಿರುಗೇಟು ನೀಡಿದರು.

ಹಿಂದೂ ವಿರೋಧಿ ಆರೋಪಕ್ಕೆ ಕೌಂಟರ್:

ಕಾಂಗ್ರೆಸ್ ಸರ್ಕಾರ ‘ಹಿಂದೂ ವಿರೋಧಿ’ ಅಂತ ಬಿಜೆಪಿಯವರು ಆರೋಪ ಮಾಡುತ್ತಿದ್ದರು. ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮುಕ್ಕಂಜೆ, ಮಾಣಿಲ, ಒಡಿಯೂರು, ಕೇಮಾರು ಮಠ ಸೇರಿದಂತೆ ವಿವಿಧ ದೇವಸ್ಥಾನ, ದೈವಸ್ಥಾನಗಳಿಗೆ ಕೋಟ್ಯಂತರ ರು. ಅನುದಾನ ನೀಡಿದೆ. ಇದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

ಹೈಕೋರ್ಟ್ ಪೀಠ ಸ್ಥಾಪನೆ ಖಚಿತ:

ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಶೇ.100ರಷ್ಟು ಖಚಿತ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಈಗಾಗಲೇ ಸತ್ಯಾಸತ್ಯತೆ ಪರಿಶೀಲನಾ ಸಮಿತಿ ರಚಿಸಿದ್ದು, ಸರ್ಕಾರ ಮೂಲಸೌಕರ್ಯ ಮತ್ತು ಜಾಗ ನೀಡಲು ಸಂಪೂರ್ಣ ಸಿದ್ಧವಿದೆ. ಪಟ್ಟಭದ್ರ ಹಿತಾಸಕ್ತಿಗಳ ವಿರೋಧದ ನಡುವೆಯೂ, ಎಲ್ಲ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಈ ಭಾಗಕ್ಕೆ ಹೈಕೋರ್ಟ್ ಪೀಠ ದೊರೆಯಲಿದೆ ಎಂದು ಐವನ್ ಡಿಸೋಜ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಅಪ್ಪಿ, ನಾಗೇಂದ್ರ ಕುಮಾರ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here