ಕುದ್ಮುಲ್ ರಂಗರಾವ್ ಸ್ಮಾರಕ ಯೋಜನೆಗಾಗಿ 89 ಮರ ತೆರವಿನ ಸಾರ್ವಜನಿಕ ವಿಚಾರಣೆಯಲ್ಲಿ ಚಕಮಕಿ! – ಮರ ಸಂರಕ್ಷಣೆಯ ಕುರಿತು ಮಾತನಾಡಿದ ವಿದ್ಯಾರ್ಥಿಗಳ ಉಪಸ್ಥಿತಿಯನ್ನು ಪ್ರಶ್ನಿಸಿದ ಕೆಲವರಿಂದ ಆಕ್ಷೇಪ – ಸಭೆಯಲ್ಲಿ ವಾಗ್ವಾದ, ಮಾತಿನ ಚಕಮಕಿ

ಮಂಗಳೂರು: ಅತ್ತಾವರದ ಬಾಬುಗುಡ್ಡೆಯಲ್ಲಿ ಕುದ್ಮುಲ್ ರಂಗ ರಾವ್ ಸ್ಮಾರಕ ಯೋಜನೆಗೆ ಅನುಕೂಲವಾಗುವಂತೆ 89 ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆ ಮಂಗಳವಾರ ಸಾರ್ವಜನಿಕ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಮರಗಳ ಸಂರಕ್ಷಣೆಗೆ ಧ್ವನಿ ಎತ್ತಿದ ಕಾಲೇಜು ವಿದ್ಯಾರ್ಥಿಗಳ ಉಪಸ್ಥಿತಿಯನ್ನು ಕೆಲವರು ವಿರೋಧಿಸಿ ಅವರನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದ ಘಟನೆ ನಡೆದಿದ್ದು, ತೀವ್ರ ವಾಗ್ವಾದ- ಮಾತಿನ ಚಕಮಕಿಗೆ ಕಾರಣವಾಯಿತು.

ಸ್ಮಾರಕ ಸ್ಥಳದಲ್ಲಿರುವ ಮರಗಳನ್ನು ಸ್ಥಳಾಂತರಿಸುವ ಮೂಲಕ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಮಾತನಾಡಿದಾಗ ಸ್ಮಾರಕ ನಿರ್ಮಾಣದ ಪರವಾಗಿರುವ ಕೆಲವರು, ಅವರನ್ನು ಸುತ್ತುವರೆದು ಮಾತನಾಡದಂತೆ ತಡೆದು ಹೊರಹೋಗುವಂತೆ ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ವೇಳೆ ನಗರದ ಖಾಸಗಿ ಕಾಲೇಜೊಂದರ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಉಪಸ್ಥಿತಿಯನ್ನು ಸಮರ್ಥಿಸಿಕೊಂಡರು. 18 ವರ್ಷ ಮೇಲ್ಪಟ್ಟ ಯಾರಿಗಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಮತ್ತು ಮಕ್ಕಳೂ ಕೂಡ ದೇಶದ ಪ್ರಜೆಗಳೇ ಎಂದು ಪ್ರತಿಪಾದಿಸಿದರು.

ಸ್ಮರಕ ಯೋಜನೆಗೆ ಪ್ರಸ್ತಾವಿತ ಜಾಗವು ಹಿಂದೆ ಸ್ಥಳೀಯ ನಿವಾಸಿಗಳು ಆಟವಾಡುತ್ತಿದ್ದ ಖಾಲಿ ಜಾಗವಾಗಿತ್ತು ಎಂದು ಮುಖಂಡ ಟಿ. ಹೊನ್ನಯ್ಯ ಪ್ರತಿಪಾದಿಸಿದರು. ಐದಾರು ವರ್ಷಗಳ ಹಿಂದೆ ಅನುಮತಿಯಿಲ್ಲದೆ ಅಲ್ಲಿ ಸಸಿಗಳನ್ನು ನೆಡಲಾಗಿತ್ತು ಎಂದು ಅವರು ಆರೋಪಿಸಿದರು. ಮಾಜಿ ಉಪಮೇಯರ್ ರಜನೀಶ್ ಕಪಿಕಾಡ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಕಲ್ಯಾಣ ಸಮಿತಿ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ರಘುವೀರ್ ಸೂಟರ್‌ಪೇಟೆ ಇದಕ್ಕೆ ಪೂರಕವಾಗಿ ಧ್ವನಿಗೂಡಿಸಿದರು.

ಅಧಿಕಾರಿಗಳ ಅನುಮತಿಯೊಂದಿಗೆ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳ ತಂಡ ಈ ಭಾಗದಲ್ಲಿ ಸಸಿಗಳನ್ನು ನೆಟ್ಟಿತ್ತು ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ತಿಳಿಸಿದರು. ನಗರದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸ್ಮಾರಕ ಅಭಿವೃದ್ಧಿಯ ಹೆಸರಿನಲ್ಲಿ ಕಾಂಕ್ರೀಟ್ ಕಾಡನ್ನು ಸೃಷ್ಟಿಸದಂತೆ ಕಾರ್ಯಕರ್ತ ಕಿಶೋರ್ ಅತ್ತಾವರ ಸಲಹೆ ನೀಡಿದರು.

ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಕೆ. ಮತ್ತಿತರ ಅಧಿಕಾರಿಗಳು ಇದ್ದರು.

ಯೋಜನೆಗೆ 89ರಲ್ಲಿ 50 ಮರ ಅಡ್ಡಿ

ಯೋಜನೆಯ ಕುರಿತು ಮಾಹಿತಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ, 2019-20ರ ಬಜೆಟ್‌ನಲ್ಲಿ ಮಹಾನಗರ ಪಾಲಿಕೆಗೆ ಮೊದಲ ಹಂತದ 100 ಕೋಟಿ ರು. ಅನುದಾನ ಬಿಡುಗಡೆಯಾದಾಗ, ಕುದ್ಮುಲ್ ರಂಗ ರಾವ್ ಸ್ಮಾರಕ ಅಭಿವೃದ್ಧಿಗಾಗಿ 3 ಕೋಟಿ ರು. ಮೀಸಲಿಡಲಾಗಿತ್ತು. ಆದರೆ, ಆ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಕುದ್ಮುಲ್ ರಂಗ ರಾವ್ ಸ್ಮಾರಕ ಟ್ರಸ್ಟ್ ಸಲ್ಲಿಸಿದ ಮನವಿಯ ಮೇರೆಗೆ, ಸ್ಮಾರಕವನ್ನು ನವೀಕರಿಸಲು ಹಾಗೂ 100 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ, ಶೌಚಾಲಯಗಳು, ಕಾವಲುಗಾರರ ಕೊಠಡಿ, ಮಕ್ಕಳ ಕೊಠಡಿ, ಎರಡೂ ಬದಿಗಳಲ್ಲಿ ಕಲ್ಲಿನ ಆಸನಗಳಿರುವ ಹೂವಿನ ಉದ್ಯಾನವನ, ಕಾರಂಜಿ, ಕುದ್ಮುಲ್ ರಂಗ ರಾವ್ ಅವರ ಪ್ರತಿಮೆ ಮತ್ತು ಆವರಣ ಗೋಡೆಯನ್ನು ನಿರ್ಮಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ ಎಂದು ಹೇಳಿದರು.

ಪರಿಶೀಲನೆಯ ಪ್ರಕಾರ, ಅಲ್ಲಿ ಒಟ್ಟು ಸುಮಾರು 89 ಮರಗಳಿವೆ. ನಿರ್ಮಾಣವಾಗಲಿರುವ ಕಟ್ಟಡ ಮತ್ತು ರಚನೆಗೆ ಅವುಗಳಲ್ಲಿ ಸುಮಾರು 50 ಮರಗಳು ಅಡಚಣೆಯಾಗಲಿವೆ. ಆದ್ದರಿಂದ, ದೊಡ್ಡ ಮರಗಳಾಗಿದ್ದರೆ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ಅವುಗಳನ್ನು ಕಡಿಯುತ್ತೇವೆ. ಸಣ್ಣ ಮರಗಳಾಗಿದ್ದರೆ, ಬೇರೆಡೆಗೆ ಸ್ಥಳಾಂತರಿಸಿ ನೆಡುವ ಕುರಿತು ಈಗಾಗಲೇ ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಶೆಣೈ ತಿಳಿಸಿದರು.

LEAVE A REPLY

Please enter your comment!
Please enter your name here