


ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಭಾರತೀಯ ತಟರಕ್ಷಕ ಪಡೆ (ಕೋಸ್ಟ್ ಗಾರ್ಡ್) ಮತ್ತು ಗುಜರಾತ್ ಎಟಿಎಸ್ ನಡೆಸಿದ ಸಾಹಸಿಕ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಮಾದಕ ದ್ರವ್ಯ ಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ. ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಇರಾನಿ ಮೂಲದ ಬೋಟ್ ಒಂದನ್ನು ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ₹3,000 ಕೋಟಿಗೂ ಅಧಿಕ ಮೌಲ್ಯದ 526 ಕೆಜಿ ಡ್ರಗ್ಸ್ ಜಫ್ತು ಮಾಡಿದ್ದು, ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿವೆ.





ಖಚಿತ ಸುಳಿವಿನ ಆಧಾರದ ಮೇಲೆ ತಟರಕ್ಷಕ ಪಡೆ ಅರಬ್ಬೀ ಸಮುದ್ರದಲ್ಲಿ ವೈಮಾನಿಕ ಹಾಗೂ ಹಡಗುಗಳ ಮೂಲಕ ತೀವ್ರ ನಿಗಾ ವಹಿಸಿತ್ತು. ಸೆಪ್ಟೆಂಬರ್ 25ರಂದು ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಇರಾನಿ ಮೂಲದ ‘ಧೋವ್’ ಬೋಟ್ ಒಂದನ್ನು ಬೆನ್ನಟ್ಟಿದ ಸಿಬ್ಬಂದಿ, ಕಡಲ ಮಧ್ಯದಲ್ಲೇ ಅದನ್ನು ತಡೆದು ಪರಿಶೀಲಿಸಿದರು. ಈ ವೇಳೆ ಬೋಟ್ನಲ್ಲಿ ಸಾಗಿಸಲಾಗುತ್ತಿದ್ದ ಉನ್ನತ ದರ್ಜೆಯ ಹೆರಾಯಿನ್ ಹಾಗೂ ಮೆಥಾಂಫೆಟಮೈನ್ ಮಾದಕ ವಸ್ತುಗಳು ಪತ್ತೆಯಾಗಿವೆ.


ವಶಪಡಿಸಿಕೊಂಡ ಡ್ರಗ್ಸ್, ಬೋಟ್ ಹಾಗೂ ಬಂಧಿತ ಆರೋಪಿಗಳನ್ನು ಸಶಸ್ತ್ರ ಭದ್ರತೆಯೊಂದಿಗೆ ಮುಂಬೈಗೆ ಕರೆದೊಯ್ಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ತನಿಖಾ ಸಂಸ್ಥೆಗಳು ಜಂಟಿ ವಿಚಾರಣೆ ನಡೆಸುತ್ತಿವೆ.
ದೇಶದ ಕಡಲ ಗಡಿಗಳಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿ ಹೊಂದಿದ್ದು, ಕೇಂದ್ರ ಸರ್ಕಾರದ ‘ನಶಾ ಮುಕ್ತ ಭಾರತ್ ಅಭಿಯಾನ’ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೋಸ್ಟ್ ಗಾರ್ಡ್ ಸದಾ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಕೋಸ್ಟ್ ಗಾರ್ಡ್ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಮಾಂಡೆಂಟ್ ಅಮಿತ್ ಉನಿಯಾಲ್ ತಿಳಿಸಿದ್ದಾರೆ.








