


ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕೈಗಾರಿಕೆಯ ಸಿಎಚ್‌ಟಿ (ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್) ಯುನಿಟ್‌ನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಗ್ರಾಮಗಳ ಭೂಮಿ, ಮನೆ- ಕಟ್ಟಡಗಳು ಕಂಪಿಸಿ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಫೋಟದಿಂದ ಸಿಬ್ಬಂದಿಯೊಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಉಳಿದ 8 ಸಿಬ್ಬಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.





ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಸಿಬ್ಬಂದಿಗೆ ಶೇ. 35ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ರಾಜೇಶ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.


ಇದಲ್ಲದೆ, ಪ್ಲಾಂಟ್‌ಗೆ ಹೊಂದಿಕೊಂಡಂತಿರುವ ಕಚೇರಿಯಲ್ಲಿದ್ದ ಆರು ಮಂದಿ ಸೇರಿ ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಒಪಿಡಿ (ಹೊರರೋಗಿ ವಿಭಾಗ) ಹಂತದಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಗಂಟೆಯೊಳಗೆ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನೆ ನಡೆದ ಬೆನ್ನಲ್ಲೇ ನಗರ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ, ಹಾಗೂ ಜಿಪಂ ಸಿಇಒ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಆತಂಕಪಡುವ ಅಗತ್ಯವಿಲ್ಲ ಹಾಗೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬೆಚ್ಚಿಬಿದ್ದ ಜನತೆ:
ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ದೂರದವರೆಗೆ ಭೂಮಿ ಬಲವಾಗಿ ಕಂಪಿಸಿದ್ದು, ಜೋಕಟ್ಟೆ ಪಂಚಾಯ್ತಿ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದೆ.
ಸ್ಫೋಟದಿಂದ ಬೈಕಂಪಾಡಿ, ಕಳುವಾರು, ಕೂಳೂರು, ಜೋಕಟ್ಟೆ ವ್ಯಾಪ್ತಿಯ ಜನ ಬೆಚ್ಚಿಬಿದ್ದಿದ್ದಾರೆ. ಮನೆಗಳಿಂದ ಹೊರಬಂದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಸ್ಫೋಟದ ಬಳಿಕ ಎಂಆರ್‌ಪಿಎಲ್ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.








