


ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗಕ್ಕೆ ಸಾವಿರಾರು ಕೋಟಿ ರು. ಅನುದಾನ ಘೋಷಿಸಿರುವುದು ಬರಿ ಕಣ್ಣೊರೆಸುವ ತಂತ್ರ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ನೈಜವಾಗಿ ಅನುದಾನ ನೀಡಲಾಗದೆ ಜನತೆಗೆ ಕಾಂಗ್ರೆಸ್ ಸರ್ಕಾರ ‘ಅಂಗೈಯಲ್ಲಿ ಆಕಾಶ’ ತೋರಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಸಭೆಗೂ ಮುನ್ನವೇ ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ಪತ್ರ ಬರೆದು ರಾಜ್ಯದಲ್ಲಿ ತೀವ್ರ ಆರ್ಥಿಕ ಅಭಾವವಿದ್ದು, ಹೊಸ ಘೋಷಣೆಗಳನ್ನು ಮಾಡಬೇಡಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಹೀಗಿದ್ದರೂ ಸಂಪುಟ ಸಭೆಯಲ್ಲಿ ಕರಾವಳಿಗೆ ₹32,000 ಕೋಟಿಗೂ ಹೆಚ್ಚು ಅನುದಾನ ಘೋಷಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.


₹8.25 ಲಕ್ಷ ಕೋಟಿ ಸಾಲದ ಸುಳಿ:
ಪ್ರಸ್ತುತ ರಾಜ್ಯ ಸರ್ಕಾರವು ₹8.25 ಲಕ್ಷ ಕೋಟಿ ಸಾಲದ ಸುಳಿಯಲ್ಲಿದೆ. ಕಳೆದ 70 ವರ್ಷಗಳಲ್ಲಿ ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳ ಮುಖ್ಯಮಂತ್ರಿಗಳು ಸೇರಿ ಮಾಡಿದ್ದ ಒಟ್ಟು ಸಾಲ ₹2.25 ಲಕ್ಷ ಕೋಟಿ. ಆದರೆ ಕೇವಲ 8.5 ವರ್ಷಗಳ (5 + 3.5 ವರ್ಷ) ಕಾಂಗ್ರೆಸ್ ಆಡಳಿತದಲ್ಲೇ ಬರೋಬ್ಬರಿ ₹6 ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಪಾಲಿಕೆಗೆ ಬಾರದ ಅನುದಾನ:
ಮಂಗಳೂರು ಮಹಾನಗರ ಪಾಲಿಕೆಗೆ ‘ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2’ ಅಡಿಯಲ್ಲಿ ₹200 ಕೋಟಿ ಘೋಷಣೆ ಮಾಡಿ, ಗುದ್ದಲಿ ಪೂಜೆ ನೆರವೇರಿಸಿದ್ದ ದಿನೇಶ್ ಗುಂಡೂರಾವ್, ಭೈರತಿ ಸುರೇಶ್ ಹಾಗೂ ಯು.ಟಿ. ಖಾದರ್ ಇಂದು ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ ಶಾಸಕರು, ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ಭೈರತಿ ಸುರೇಶ್ ಅವರು ಪಾಲಿಕೆಗೆ ಘೋಷಿಸಿದ್ದ ₹ 25 ಕೋಟಿ ಅನುದಾನ ಇದುವರೆಗೆ ಬಂದಿಲ್ಲ. ಕಳೆದ ಮೂರೂವರೆ ವರ್ಷಗಳಲ್ಲಿ ಸೂಕ್ತ ಅನುದಾನ ನೀಡದ ಈ ಸರ್ಕಾರ ಇನ್ನುಳಿದ ಒಂದೂವರೆ ವರ್ಷದಲ್ಲಿ ನೀಡುತ್ತದೆ ಎಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.








