


ಮಂಗಳೂರು: ಕರಾವಳಿ ಕರ್ನಾಟಕ ಭಾಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಅಥವಾ ಶಾಶ್ವತ ಪೀಠ ಸ್ಥಾಪನೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಸಮಿತಿ ಅ.18ರ ಬಳಿಕ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೂ ಮೊದಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಅ.12ರಂದು ಮಧ್ಯಾಹ್ನ 11:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ ಎಂದು ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.




ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಲಾಗಿದೆ. ಅಲ್ಲದೆ, ಕೆನರಾ ಚೇಂಬರ್ ಆಫ್ ಕಾಮರ್ಸ್, ಭಾರತೀಯ ವೈದ್ಯಕೀಯ ಸಂಘ, ಕಾನೂನು ವಿದ್ಯಾರ್ಥಿಗಳ ಒಕ್ಕೂಟ, ಕಾರ್ಮಿಕ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ಪ್ರಾಧ್ಯಾಪಕರು, ಎನ್ಎಂಪಿಎ ಬೋರ್ಡ್ ಪ್ರತಿನಿಧಿಗಳನ್ನು ಸೇರಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಈ ಸಭೆಯಲ್ಲಿ ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ ಒಗ್ಗಟ್ಟಿನಿಂದ ಕರಾವಳಿಗೆ ಹೈಕೋರ್ಟ್ ಪೀಠದ ಅಗತ್ಯವನ್ನು ಪ್ರತಿಪಾದಿಸಲಾಗುವುದು ಎಂದು ಹೇಳಿದರು.


ಕರಾವಳಿ, ಮಲೆನಾಡು ಜಿಲ್ಲೆಗಳಲ್ಲೂ ಸಭೆ:
ಹೈಕೋರ್ಟ್ ಸಮಿತಿ ಭೇಟಿ ನೀಡುವ ಮುನ್ನ ಅ.15ರೊಳಗೆ ಕರಾವಳಿ, ಮಲೆನಾಡಿನ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಐವನ್ ಡಿಸೋಜ ಮಾಹಿತಿ ನೀಡಿದರು.
ಬಾರ್ ಎಸೋಸಿಯೇಶನ್ ಗಳಿಗೆ ಭೇಟಿ:
ಮುಂದಿನ ಒಂದು ವಾರದೊಳಗೆ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯ ಎಲ್ಲ ವಕೀಲರ ಸಂಘಗಳಿಗೆ (ಬಾರ್ ಎಸೋಸಿಯೇಶನ್) ಭೇಟಿ ನೀಡಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೀಠ ಸ್ಥಾಪನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸೇರಿದಂತೆ ಅಲ್ಲಿ ಲಭ್ಯವಿರುವ ಸುಮಾರು 50,000 ಚದರ ಅಡಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ನ್ಯಾಯಮೂರ್ತಿಗಳಿಗೆ ವಸತಿ ಸೌಕರ್ಯಕ್ಕಾಗಿ ವಸತಿ ಗೃಹಗಳನ್ನು ಕೂಡ ಗುರುತಿಸಲಾಗಿದೆ ಎಂದು ತಿಳಿಸಿದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನದ ಹೋರಾಟದಂತೆ, ಕರಾವಳಿ ಭಾಗದ ಎಲ್ಲ ಶಾಸಕರು, ಸಂಸದರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಐವನ್ ಡಿಸೋಜ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ಎಂ.ಪಿ. ನರೋನ್ನ, ಉಡುಪಿ ಬಾರ್ ಎಸೋಸಿಯೇಶನ್ ಅಧ್ಯಕ್ಷ ರೊನಾಲ್ಡ್ ಪ್ರವೀಣ್, ಮಂಗಳೂರು ಬಾರ್ ಎಸೋಸಿಯೇಶನ್ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್, ಉಡುಪಿ ವಕೀಲರ ಸಂಘದ ಸದಸ್ಯ ಆದಿತ್ಯ ಮತ್ತಿತರರು ಇದ್ದರು.







