


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರು, ಕ್ರೈಸ್ತರು ಮತ್ತು ದಲಿತ ಸಮುದಾಯದ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಬಿಜೆಪಿ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಸ್ವತಃ ಬಿಜೆಪಿ ಕಚೇರಿಯ ಅಧಿಕೃತ ಲೆಟರ್ಹೆಡ್ ಬಳಸಿ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ದಾಖಲೆಗಳ ಸಮೇತ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ.





ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಿಯೋಗವು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರಿಗೆ ಅಧಿಕೃತ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ.


ಪುತ್ತೂರಲ್ಲಿ ಬಿಜೆಪಿ ಲೆಟರ್ಹೆಡ್ ನಲ್ಲೇ ಅಕ್ರಮ:
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯ ಅಧಿಕೃತ ಲೆಟರ್ಹೆಡ್ನಲ್ಲೇ ಬೂತ್ ಸಂಖ್ಯೆ 177ರ 4 ಮತದಾರರು, ಬೂತ್ ಸಂಖ್ಯೆ 123ರ 12 ಮತದಾರರು “ವಾಸವಾಗಿರುವುದಿಲ್ಲ” ಎಂದು ನಮೂದಿಸಿ ಅವರ ಹೆಸರು ಹಾಗೂ ಎಪಿಕ್ (ಮತದಾನ ಗುರುತಿನ ಚೀಟಿ) ಸಂಖ್ಯೆಗಳನ್ನು ನಮೂದಿಸಿ ಪಟ್ಟಿಯಿಂದ ಹೆಸರು ಅಳಿಸಲು ಮತದಾರರ ನೋಂದಣಾಧಿಕಾರಿಗೆ ಸಲ್ಲಿಸಲಾದ ಪತ್ರವನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಬಹಿರಂಗಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಪ್ರತಿಯೊಬ್ಬ ನಾಗರಿಕನ ಅತ್ಯಮೂಲ್ಯ ಸಂವಿಧಾನಬದ್ಧ ಹಕ್ಕು. ಆದರೆ, ಬಿಜೆಪಿಯವರು ಜೀವಂತವಿರುವ ಹಾಗೂ ಸ್ಥಳದಲ್ಲೇ ವಾಸವಿರುವ ಅಲ್ಪಸಂಖ್ಯಾತ ಮತ್ತು ದಲಿತ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಸುಳ್ಳು ಮಾಹಿತಿ ನೀಡಿ ಮತದಾರರ ಹೆಸರು ಡಿಲೀಟ್ ಮಾಡಲು ಅರ್ಜಿ ಸಲ್ಲಿಸುವುದು ಅಥವಾ ಇತರರ ಪರವಾಗಿ ಅಕ್ರಮವಾಗಿ ಅರ್ಜಿಗಳನ್ನು ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕನಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ. ಆದ್ದರಿಂದ ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಕಾಶ್ ಸಿಕ್ವೇರಾ, ಉಪಾಧ್ಯಕ್ಷರಾದ ಜಾರ್ಜ್ ಟಿ.ವಿ., ಜಾನ್ ಬಿ. ಮೊಂತೇರೊ, ಸಬಿತಾ ಮಿಸ್ಕಿತ್, ಮುಖಂಡರಾದ ಮೀನಾ ಟೆಲ್ಲಿಸ್, ಅಬ್ದುಲ್ ರವೂಫ್, ಏರ್ಪೋರ್ಟ್ ಖಾದರ್, ಮೊಹಮ್ಮದ್ ಬಬ್ಬಳಿಗೆ, ಹಬೀಬುಲ್ಲಾ ಕಣ್ಣೂರು ಇದ್ದರು.








