


ಮಂಗಳೂರು: ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ತೆಗೆದುಹಾಕಲು ಫಾರಂ-7ನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಎಫ್ಐಆರ್ ಗಳು ದಾಖಲಾಗಿವೆ. ಈ ಬಗ್ಗೆ ಸ್ವತಃ ಎಸ್ಐಆರ್ ಸಂತ್ರಸ್ತರೇ ದೂರು ನೀಡಿದ್ದಾರೆ. ಬಿಜೆಪಿಯವರು ಎಸ್ಐಆರ್ ದುರ್ಬಳಕೆ ಮಾಡುತ್ತಿದ್ದಾರೆ ಎಂಬುದಕ್ಕೆ ಬೇರೆ ಯಾವ ಸಾಕ್ಷಿ ಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಜಂಟಿ ಹೇಳಿದ್ದಾರೆ.





ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಕಾವೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದರು.


ನ್ಯಾಯಾಲಯದ ನಿರ್ದೇಶನದಂತೆ ಎಫ್ಐಆರ್:
ನಕಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಆಕ್ಷೇಪ ಸಲ್ಲಿಸಿದ್ದರ ವಿರುದ್ಧ ಮೂಡುಶೆಡ್ಡೆ ಗ್ರಾಮದ ಸಂತ್ರಸ್ತರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜೆಎಂಎಫ್ಸಿ 3ನೇ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಅ.6ರಂದು ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಸ್ಥಳೀಯ ನೈಜ ಮತದಾರರಾದ ಅನೀಶಾ, ಆಯಿಷಾ ಬಾನು, ಅಬ್ದುಲ್ ಲತೀಫ್, ನಬೀಸಾ, ಮೊಹಮ್ಮದ್ ಅಲ್ತಾಫ್, ಮೊಹಮ್ಮದ್ ಆಶ್ಫಕ್ ಹಾಗೂ ಫಯಾಝ್ ಎಂಬವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಿಥುನ್ ರೈ ವಿವರಿಸಿದರು.
ನಾಲ್ವರಲ್ಲಿ ಒಬ್ಬ ಮಾತ್ರ ಬಿಜೆಪಿಯ ಬಿಎಲ್ಎ-2:
ಮೂಡುಶೆಡ್ಡೆ ಭಾಗ ಒಂದರಲ್ಲೇ ಒಟ್ಟು 68 ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಅದರಲ್ಲಿ ಒಂದೇ ಕೈಬರಹದಲ್ಲಿ ಕಿಶನ್ ಎಂಬವರ ಹೆಸರಿನಲ್ಲಿ 45 ಅರ್ಜಿಗಳು, ರಿತೇಶ್ ಎಂಬುವವರ ಹೆಸರಿನಲ್ಲಿ 9, ಯುವರಾಜ್ ಎಂಬುವವರ ಹೆಸರಿನಲ್ಲಿ 10 ಹಾಗೂ ಶಶಿಕಲಾ ಎಂಬುವವರ ಹೆಸರಿನಲ್ಲಿ 4 ಅರ್ಜಿಗಳನ್ನು ದುರುದ್ದೇಶಪೂರ್ವಕವಾಗಿ ಸಲ್ಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪೈಕಿ ಯುವರಾಜ್ ಎಂಬವರು ಮಾತ್ರ ಬಿಜೆಪಿಯ ಬಿಎಲ್ಎ-2 ಆಗಿದ್ದರೆ, ಉಳಿದವರು ಅರ್ಜಿ ಸಲ್ಲಿಸಿದ್ದು ಹೇಗೆ? ಸ್ಥಳೀಯ ಶಾಸಕರಿಗೆ ಗೊತ್ತಿಲ್ಲದೆ ಇದು ನಡೆದಿದೆಯಾ ಎಂದು ಪ್ರಶ್ನಿಸಿದರು.
ಬೆಳ್ತಂಗಡಿ ಪೊಲೀಸ್ ಠಾಣೆ (ಪ್ರಕರಣ 3):
ಇದೇ ರೀತಿ ನಕಲಿ ಅರ್ಜಿಗಳನ್ನು ಸಲ್ಲಿಸಿದ ಮತ್ತೊಂದು ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೂಡ ಎಫ್ಐಆರ್ ದಾಖಲಾಗಿದೆ ಎಂದರು.
ಶಾಮೀಲಾದ ಎಲ್ಲರ ಮೇಲೆ ಕ್ರಮ ಆಗಲಿ:
ಸಾಮಾನ್ಯ ಪ್ರಜೆಯ, ಶೋಷಿತ ವರ್ಗದ ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯಲು ಸಂಚು ರೂಪಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಇದು ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿದೆ. ನಕಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳು, ಇದರ ಹಿಂದಿರುವ ಬಿಜೆಪಿ ಮುಖಂಡರು ಹಾಗೂ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.
ಬಿಪಿಜೆಯವರು ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕ್ಯಾಥೋಲಿಕ್ ಹಾಗೂ ಮುಸ್ಲಿಂ ಸಮುದಾಯದ ಮತದಾರರ ಹಕ್ಕು ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ. ಜೋಕಟ್ಟೆ ಭಾಗದಲ್ಲಿ ಸುಮಾರು 61 ಕ್ರಿಶ್ಚಿಯನ್ ಸಮುದಾಯದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ್ದಾರೆ ಎಂದು ಪದ್ಮರಾಜ್ ಆರ್. ಪೂಜಾರಿ ದಾಖಲೆ ಸಹಿತ ವಾಗ್ದಾಳಿ ನಡೆಸಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ಆದರೆ ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿರುವುದು ಅವರ ನೈತಿಕತೆಯ ಕುಸಿತವನ್ನು ತೋರಿಸುತ್ತದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರನ್ನು ರಕ್ಷಿಸುವುದೇ ಬಿಜೆಪಿ ಸಂಸ್ಕೃತಿ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಶಿಧರ ಹೆಗ್ಡೆ, ಲಾರೆನ್ಸ್ ಡಿಸೋಜ, ಅಪ್ಪಿ ಮತ್ತಿತರರು ಇದ್ದರು.








