


ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026 ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.11ರಿಂದ 22ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಈ ಉತ್ಸವ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಭವ್ಯ ದರ್ಬಾರ್ ಹಾಲ್ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದೆ. ಈ ಬಾರಿಯ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ಅತ್ಯಂತ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ಲಕ್ಷದೀಪೋತ್ಸವ, ನೃತ್ಯ-ಸಂಗೀತ ವೈಭವ, ಕ್ರೀಡಾಕೂಟಗಳು ಮತ್ತು ಸಮೃದ್ಧ ಜಾನಪದ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ ಎಂದರು.


ಅ.11ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ.12ರಂದು ಸಂಜೆ 6:30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ವಿವಿಧ ಇಲಾಖೆಗಳ ಸಚಿವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಪದ್ಮರಾಜ್ ತಿಳಿಸಿದರು.
ಅ.12ರಿಂದ 20ರವರೆಗೆ ಪ್ರತಿದಿನ ಬೆಳಿಗ್ಗೆ 8:30ಕ್ಕೆ ಕ್ಷೇತ್ರದಲ್ಲಿ ಚಂಡಿಕಾಹೋಮ ನೆರವೇರಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಜರುಗಲಿದ್ದು, ಬೆಳಗ್ಗೆ 11:30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೂ ಚಂಡಿಕಾಹೋಮ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.
22ರಂದು ಅಕ್ಷರಾಭ್ಯಾಸ:
ಅ.22ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.
21ರಂದು ಶೋಭಾಯಾತ್ರೆ:
ಅ.21ರಂದು ಸಂಜೆ 4 ಗಂಟೆಗೆ ಮಂಗಳೂರು ದಸರಾ ಮಹೋತ್ಸವದ ಐತಿಹಾಸಿಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ ಎಂದು ಪದ್ಮರಾಜ್ ತಿಳಿಸಿದರು.
ದಸರಾ ಕಲಾಝೇಂಕಾರ:
ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ನಿತ್ಯ ಮಧ್ಯಾಹ್ನ 2:30ರಿಂದ ರಾತ್ರಿ 11:30ರವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ರಸದೌತಣ ಇರಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿದಿನವೂ ಸಮಾಜದ ಸಾಧಕ ಮಹಿಳೆಯರಿಗೆ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.
ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಟ್ರಸ್ಟಿಗಳಾದ ಚಿತ್ತರಂಜನ್ ಬೋಳಾರ್, ಶೇಖರ್, ಅಭಿಲಾಷ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ, ಚಂದನ್ ದಾಸ್ ಹಾಗೂ ಸಮಿತಿ ಪ್ರಮುಖರಾದ ಲೀಲಾಕ್ಷ ಕರ್ಕೇರ, ಜತಿನ್ ಅತ್ತಾವರ, ಸತೀಶ್ ಸುವರ್ಣ, ಸತ್ಯಬೋಧ, ಪ್ರವೀಣ್ ಇದ್ದರು
ಎಂ.ಆರ್. ಪೂವಮ್ಮಗೆ ವಿಶೇಷ ಸನ್ಮಾನ
ಏಷ್ಯನ್ ಗೇಮ್ಸ್ನಲ್ಲಿ ಬಂಗಾರದ ಪದಕ ಗೆದ್ದು ಮಂಗಳೂರು ಹಾಗೂ ದೇಶಕ್ಕೆ ಕೀರ್ತಿ ತಂದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಅ.12ರಂದು ಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಪದ್ಮರಾಜ್ ತಿಳಿಸಿದರು
ಮೂವರು ಸಾಧಕರಿಗೆ ಗೌರವ ಸಮ್ಮಾನ
ದಸರಾ ಕಾರ್ಯಕ್ರಮಗಳ ಸನ್ನಿವೇಶದಲ್ಲಿ ನೀಡಲಾಗುವ ಗೌರವ ಸಮ್ಮಾನ ಪ್ರಶಸ್ತಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಹಿರಿಯ ವಿದ್ವಾಂಸ ಪ್ರೊ. ವಿವೇಕ್ ರೈ ಹಾಗೂ ತುಳು ರಂಗಭೂಮಿ ಕಲಾವಿದ ಸಂಜೀವ ದಂಡಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮವು ಅ.20ರಂದು ನಡೆಯಲಿದೆ.








