


- ಯುಎಇಯಲ್ಲಿ ತುಂಬೆ ಗ್ರೂಪ್ ಸಂಸ್ಥೆಗಳಿಗೆ 30 ವರ್ಷ
- ಮಾಧ್ಯಮ ಸಂವಾದದಲ್ಲಿ ಭವಿಷ್ಯದ ಯೋಜನೆಗಳನ್ನು ತಿಳಿಸಿದ ತುಂಬೆ ಮೊಯ್ದೀನ್
ಮಂಗಳೂರು: 1997ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ವೈದ್ಯಕೀಯ, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವ ತುಂಬೆ ಗ್ರೂಪ್ ಇದೀಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ತುಂಬೆ ಗ್ರೂಪ್ ವೈದ್ಯಕೀಯ ಶಿಕ್ಷಣ ಕೇಂದ್ರಗಳ ವಿಶ್ವದ ಅತಿದೊಡ್ಡ ಜಾಲವನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಮಂಗಳೂರಿನಲ್ಲೂ ಫಿಸಿಯೊಥೆರಪಿ, ನರ್ಸಿಂಗ್ ನಂತಹ ಅರೆವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆ ಇದೆ ಎಂದು ತುಂಬೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಹೇಳಿದ್ದಾರೆ.


ಯುಎಇಯಲ್ಲಿ ತುಂಬೆ ಗ್ರೂಪ್ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ ತುಂಬೆಯಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1997ರಲ್ಲಿ ಯುಎಇ ಸರ್ಕಾರದ ಪ್ರೋತ್ಸಾಹದೊಂದಿಗೆ ಸ್ಥಾಪನೆಯಾದ ತುಂಬೆ ಗ್ರೂಪ್ 30ನೇ ವರ್ಷಕ್ಕೆ ಕಾಲಿಟ್ಟಿದೆ. ವೈದ್ಯಕೀಯ ಶಿಕ್ಷಣದ ಮೂಲಕ ಆರಂಭವಾದ ಸಂಸ್ಥೆ ಇಂದು ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ, ರೋಗ ನಿರ್ಣಯ, ಫಾರ್ಮಸಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಬಹುಮುಖಿ ಸಂಸ್ಥೆಯಾಗಿ ಬೆಳೆದಿದೆ. ಈಗ ನಾವು 7 ಕಾಲೇಜುಗಳನ್ನು ಹೊಂದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಲೇಜುಗಳ ಸಂಖ್ಯೆಯನ್ನು 15ಕ್ಕೆ ಏರಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.


ಗಲ್ಫ್ ಮೆಡಿಕಲ್ ಕಾಲೇಜು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಆಗಿ ವಿಕಸನಗೊಂಡಿದೆ. ಮಾತ್ರವಲ್ಲದೆ, ಗಲ್ಫ್ ಪ್ರದೇಶದ ನಂ.1 ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ. ಗಲ್ಫ್ ಮೆಡಿಕಲ್ ವಿವಿಯು ಏಳು ಕಾಲೇಜುಗಳು, 50ಕ್ಕೂ ಹೆಚ್ಚು ಮಾನ್ಯತೆ ಪಡೆದ ಕೋರ್ಸ್ ಗಳು, 111 ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 5,000 ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಗಳನ್ನು ಹೊಂದಿದೆ. ಇದುವರೆಗೆ 175ಕ್ಕೂ ಅಧಿಕ ರಾಷ್ಟ್ರಗಳ 1.9 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಹೆರಿಗೆಗಳು ನಡೆದಿವೆ ಎಂದು ತುಂಬೆ ಮೊಯ್ದೀನ್ ಮಾಹಿತಿ ನೀಡಿದರು.


ಭವಿಷ್ಯದ ಯೋಜನೆಗಳು: ತುಂಬೆ ಗ್ರೂಪ್ ತನ್ನ ಜಾಲವನ್ನು ವಿಸ್ತಾರ ಮಾಡುತ್ತಿದ್ದು, ಶಾರ್ಜಾ ಹೆಲ್ತ್ಕೇರ್ ಸಿಟಿಯಲ್ಲಿ 120 ಹಾಸಿಗೆಗಳ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಅಜ್ಮಾನ್ನ ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯಕೀಯ ಬೋಧನಾ ಆಸ್ಪತ್ರೆ ಮತ್ತು ಪಶುವೈದ್ಯಕೀಯ ಕಾಲೇಜಿನ ಯೋಜನೆಯೂ ಮುಂದುವರಿದಿದೆ. ತುಂಬೆ ಇಂಟರ್ನ್ಯಾಷನಲ್ ರಿಸರ್ಚ್ ಸೆಂಟರ್ ಮೂಲಕ ಸಂಶೋಧನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಉದ್ದೇಶಿಸಲಾಗಿದೆ. ಪ್ರಿಸಿಷನ್ ಮೆಡಿಸಿನ್ ಕ್ಷೇತ್ರದಲ್ಲೂ ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದರು.
ದುಬೈನಲ್ಲಿ ತುಂಬೆ ಮೆಡಿಸಿಟಿ ಯೋಜನೆ ಮುಂದಿನ ಪ್ರಮುಖ ಯೋಜನೆಯಾಗಿದ್ದು, ಸುಮಾರು 1,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸ್ವಿಟ್ಜರ್ಲೆಂಡ್ನ ಜಿನೀವಾ ಕಾಲೇಜ್ ಆಫ್ ಲಾಂಜೆವಿಟಿ ಸೈನ್ಸ್ ಸಹಯೋಗದಲ್ಲಿ ದೀರ್ಘಾಯುಷ್ಯ ವೈದ್ಯಕೀಯ ಕ್ಷೇತ್ರದಲ್ಲಿ ಯುಎಇಯ ಮೊದಲ ಶೈಕ್ಷಣಿಕ ಕಾರ್ಯಕ್ರಮಗಳನ್ನೂ ಘೋಷಿಸಲಾಗಿದೆ ಎಂದರು.
ತುಂಬೆ ಗ್ರೂಪ್ ಕೇಂದ್ರಬಿಂದು ಅಜ್ಮಾನ್ನ ಅಲ್ ಜುರ್ಫ್ನಲ್ಲಿರುವ 25 ಎಕರೆಯಲ್ಲಿ ‘ತುಂಬೆ ಮೆಡಿಸಿಟಿ’ ಇದೆ. ಇದು ಇಡೀ ಗಲ್ಫ್ ಪ್ರದೇಶದ ಅತಿದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆಯಾದ 350 ಹಾಸಿಗೆಗಳ ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್, ತುಂಬೆ ಡೆಂಟಲ್ ಹಾಸ್ಪಿಟಲ್ ಹಾಗೂ ತುಂಬೆ ಫಿಸಿಕಲ್ ಥೆರಪಿ ಅಂಡ್ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್ ಗಳನ್ನು ಒಳಗೊಂಡಿದೆ. ಈ ಸಂಯೋಜಿತ ಸೌಲಭ್ಯಕ್ಕೆ ಪ್ರತಿದಿನ ಸುಮಾರು 15,000 ಜನರು ಭೇಟಿ ನೀಡುತ್ತಾರೆ ಎಂದು ತುಂಬೆ ಮೊಯ್ದೀನ್ ಹೇಳಿದರು.








