


ಮಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯು ಕರ್ನಾಟಕದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕಗೊಳಿಸಲಾಗಿದೆ.


ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಕಾಂಗ್ರೆಸ್ನ ನೂತನ ಜಿಲ್ಲಾಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.


ಕಾರ್ಯಕರ್ತರ ನಾಯಕ:


ಪಕ್ಷದ ಜಿಲ್ಲಾ ಘಟಕಗಳ ಪುನಶ್ಚೇತನ ಹಾಗೂ ತಳಮಟ್ಟದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕೈಗೊಂಡ ‘ಸಂಘಟನ್ ಸೃಜನ್ ಅಭಿಯಾನ’ ಮುಖಾಂತರ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಪ್ರತಿಯೊಂದು ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸ್ಥಳೀಯವಾಗಿ ಸಮಗ್ರ ಪರಿಶೀಲನೆ ನಡೆಸಿ, ಪಕ್ಷದ ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಿ ಸಮಗ್ರ ವರದಿಯನ್ನು ಹೈಕಮಾಂಡ್ಗೆ ಸಲ್ಲಿಸಿದ್ದರು.
ವರದಿ ಸಲ್ಲಿಕೆಯಾದ ಬಳಿಕ ಎಐಸಿಸಿ ವೀಕ್ಷಕರು ಹಾಗೂ ರಾಜ್ಯದ ಹಿರಿಯ ನಾಯಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ ಅಂತಿಮವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಪದ್ಮರಾಜ್ ಆರ್. ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದುವರೆಗೆ ನಾಯಕರು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ಬಾರಿ ಕಾರ್ಯಕರ್ತರ ನಾಯಕರಾಗಿ ಪದ್ಮರಾಜ್ ಹೊರಹೊಮ್ಮಿದ್ದಾರೆ.
ಪದ್ಮರಾಜ್ ಹಿನ್ನೆಲೆ:
ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಿಂದ ಬಿಎ, ಎಲ್ಎಲ್ಬಿ ಪದವಿ ಪಡೆದಿರುವ ಪದ್ಮರಾಜ್ ಪೂಜಾರಿ ಅವರು ವೃತ್ತಿಯಲ್ಲಿ ವಕೀಲರು ಹಾಗೂ ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಇವರು, 2024ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಗಮನ ಸೆಳೆದಿದ್ದರು.
ಮಂಗಳೂರಿನ ಪ್ರಸಿದ್ಧ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಸುದೀರ್ಘ ಕಾಲದಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಮುದಾಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಕೊಂಡಿಯಾಗಿ ಜನಪ್ರಿಯತೆ ಹೊಂದಿದ್ದಾರೆ.
ಪಕ್ಷ ಸಂಘಟನೆಗೆ ಹೊಸ ಚೈತನ್ಯ:
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು, ಕಾರ್ಯಕರ್ತರನ್ನು ಒಗ್ಗೂಡಿಸಲು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸಲು ಪದ್ಮರಾಜ್ ಪೂಜಾರಿ ಅವರ ನೇಮಕವು ಪ್ರಮುಖ ತಿರುವು ನೀಡಲಿದೆ ಎಂದು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.







