ಸೆ.14ರಿಂದ ಬಂಟ್ಸ್‌ ಹಾಸ್ಟೆಲ್ ಸಾರ್ವಜನಿಕ ಗಣೇಶೋತ್ಸವ

ಮಹಾಗಣಯಾಗ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ: ಅಜಿತ್ ಕುಮಾರ್ ರೈ ಮಾಲಾಡಿ
​
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ (ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು), ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 14ರಿಂದ 16ರವರೆಗೆ ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ನ ‘ಓಂಕಾರ ನಗರ’ದಲ್ಲಿ ಜರುಗಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ಸಂಜೆ 5.00 ಗಂಟೆಗೆ ಶರವು ದೇವಸ್ಥಾನದ ಬಳಿಯ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶ್ರೀ ರಾಮದಾಸ್ ಆಚಾರ್ಯರ ಶಿಲ್ಪದಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್‌ಹಾಸ್ಟೆಲ್‌ನ ಓಂಕಾರ ನಗರಕ್ಕೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಗುವುದು. ಸೆ.14ರಂದು ಬೆಳಗ್ಗೆ 8 ಗಂಟೆಗೆ ಸ್ಥಳ ಶುದ್ಧಿ, ಮೂರ್ತಿ ಪ್ರತಿಷ್ಠಾಪನೆ, 9 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವದ ಉದ್ಘಾಟನೆ ಮತ್ತು ತೆನೆ ವಿತರಣೆ ನಡೆಯಲಿದೆ. ಸಂಜೆ 3 ಗಂಟೆಗೆ ‘ಶ್ರೀ ಮಂಗಳಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯ ನಾಟಕ, ಸಂಜೆ 5ರಿಂದ 7ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 7.30ಕ್ಕೆ ರಂಗಪೂಜೆ, ಮಹಾಪೂಜೆ ಮತ್ತು 8.00 ರಿಂದ ‘ಬಂಟ್ಸ್‌ಕಲಾ ಸಂಗಮ-2026’ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿವೆ.

ಸೆ.15ರಂದು ಬೆಳಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4.00 ಗಂಟೆಯಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗದ ಯಾಗಶಾಲಾ ಪ್ರವೇಶ ಹಾಗೂ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ. ಸಂಜೆ 5ರಿಂದ 7ರವರೆಗೆ ಧಾರ್ಮಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ, ರಾತ್ರಿ 7.30ಕ್ಕೆ ರಂಗಪೂಜೆ, ಮಹಾಪೂಜೆ ಹಾಗೂ 8ರಿಂದ ‘ಸ್ವರಲಯ ಸಿಂಫೋನಿ’ ಕಲಾಶಾಲೆಯಿಂದ ಅಭಿನಯ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದರು.

ಸೆ.16ರಂದು ಬೆಳಗ್ಗೆ 8.30ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು, 11 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನಡೆದು, ಓಂಕಾರನಗರದಿಂದ ಬಂಟ್ಸ್‌ಹಾಸ್ಟೆಲ್ ಸರ್ಕಲ್, ಕೆ.ಎಸ್‌.ಆರ್‌.ಟಿ.ಸಿ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯ ಮೂಲಕ ವೈಭವದ ಶೋಭಾಯಾತ್ರೆ ಸಾಗಿ ಶ್ರೀ ಮಹಾಮಾಯ ದೇವಸ್ಥಾನದ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುವುದು. ಮೂರು ದಿನಗಳ ಕಾಲ ಗಣೇಶೋತ್ಸವದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ತಂಡಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

​ಸುದ್ದಿಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ರವಿರಾಜ್ ಶೆಟ್ಟಿ, ಡಾ. ಆಶಾಜ್ಯೋತಿ ರೈ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಜ್ಪೆ ಇದ್ದರು.

LEAVE A REPLY

Please enter your comment!
Please enter your name here