


ಮಂಗಳೂರು: ಕರಾವಳಿಯಲ್ಲಿ ಕಥೋಲಿಕ್ ಸಮುದಾಯದವರು ಮಂಗಳವಾರ ಮೊಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಚರ್ಚ್ಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು.





ಏಸು ಸ್ವಾಮಿಯ ತಾಯಿ ಮೇರಿ ಮಾತೆಯ ಹುಟ್ಟು ಹಬ್ಬವನ್ನು ಕಥೋಲಿಕ್ ಕ್ರೈಸ್ತರು ಮೊಂತಿ ಹಬ್ಬವಾಗಿ ಆಚರಿಸುತ್ತಾರೆ. ಮಂಗಳೂರಿನಾದ್ಯಂತ ಸಮುದಾಯ ಬಾಂಧವರು ಆಶೀರ್ವಚನ ಮಾಡಿದ ಭತ್ತದ ತೆನೆಯ ಕಾಳುಗಳನ್ನು ಹಾಲಿನಲ್ಲಿ ಅಥವಾ ಪಾಯಸದಲ್ಲಿ ಬೆರೆಸಿ ಸೇವಿಸುವ ಜತೆಗೆ ಸಸ್ಯಾಹಾರ ಭೋಜನ ಸ್ವೀಕರಿಸಿದರು.


ಮಕ್ಕಳು ಹೂವುಗಳನ್ನು ತಂದು ಮೇರಿ ಮಾತೆಗೆ ಅರ್ಪಿಸಿ ಸಿಹಿ ತಿಂಡಿಗಳ ಜತೆಗೆ ಕಬ್ಬು ಪಡೆದು ಸಂಭ್ರಮಿಸಿದರು. ಚರ್ಚ್ಗಳಲ್ಲಿ ಮೆರವಣಿಗೆಯ ಮೂಲಕ ಭತ್ತದ ತೆನೆಯನ್ನು ತಂದು ಸಂಭ್ರಮದ ಬಲಿಪೂಜೆಯಲ್ಲಿ ಭಕ್ತರು ಭಾಗಹಿಸಿದರು. ಚರ್ಚ್ಗಳಲ್ಲಿ ಹಬ್ಬದ ಸಂತೋಷ ಹಂಚಿಕೊಳ್ಳಲು ಎಲ್ಲ ಭಕ್ತರಿಗೆ ಕಬ್ಬು ವಿತರಣೆ ಮಾಡಲಾಯಿತು. ಕೆಲವು ಚರ್ಚ್ಗಳಲ್ಲಿ ಹಬ್ಬದ ದಿನ ಸಂಜೆ ಧರ್ಮಕೇಂದ್ರ ಮಟ್ಟದಲ್ಲಿ ವಿವಿಧ ಸ್ಪರ್ಧೆ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕರಾವಳಿಯ ಎರಡು ಧರ್ಮಪ್ರಾಂತ್ಯಗಳಲ್ಲಿರುವ ಎಲ್ಲ ಚರ್ಚ್ಗಳಲ್ಲಿ ಮಂಗಳವಾರ ವಿಶೇಷ ಬಲಿಪೂಜೆ ನಡೆಯಿತು. ಮಂಗಳೂರು ನಗರದ ಮಿಲಾಗ್ರಿಸ್, ರೊಸಾರಿಯೊ, ಉರ್ವ ಲೇಡಿಹಿಲ್, ಬೆಂದೂರ್ ವೆಲ್, ಅಶೋಕ ನಗರ, ಕೂಳೂರು, ಕುಲಶೇಖರ ಸೇರಿದಂತೆ ಪ್ರಮುಖ ಚರ್ಚ್ಗಳಲ್ಲಿ ಹಬ್ಬದ ದಿನ ಬಲಿಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೆೃಸ್ತರು ಪ್ರಾರ್ಥನಾವಿಧಿಗಳಲ್ಲಿ ಪಾಲ್ಗೊಂಡರು. ಮಂಗಳೂರು ಕ್ರೆೃಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ನಗರದ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಮೊಂತಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿಸಿದರು.








