ಮಲೆನಾಡು ಪ್ರವಾಸೋದ್ಯಮ ನಿಗಮ ಸ್ಥಾಪನೆಗೆ ನಿರ್ಧಾರ: ಯು.ಟಿ. ಖಾದರ್ – ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ

ಕರಾವಳಿ ಕರ್ನಾಟಕಕ್ಕೆ ದೇಶ- ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರ್ಕಾರವು ಮಲೆನಾಡು ಪ್ರವಾಸೋದ್ಯಮ ನಿಗಮ ಸ್ಥಾಪಿಸಲು ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ವೆನ್‌ಲಾಕ್‌ನಲ್ಲಿ ಹೊಸದಾಗಿ ಹೊರರೋಗಿ ವಿಭಾಗ (ಒಪಿಡಿ) ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದ್ದು, 70 ಕೋಟಿ ರು. ವೆಚ್ಚದಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ವೆನ್‌ಲಾಕ್ ಆಸ್ಪತ್ರೆಯ ಸಮಗ್ರ ಚಿತ್ರಣವನ್ನೇ ಬದಲಾಯಿಸಿ, ಇನ್ನಷ್ಟು ಸಾರ್ವಜನಿಕ ಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಈ ವರ್ಷ ಜಿಲ್ಲೆಯಲ್ಲಿ 150 ವಿದ್ಯಾರ್ಥಿಗಳ ಸಾಮರ್ಥ್ಯದ ಬಾಲಕರ ಮತ್ತು ಬಾಲಕಿಯರ 2 ಪ್ರತ್ಯೇಕ ಹಾಸ್ಟೆಲ್‌ಗಳನ್ನು ಮಂಜೂರುಗೊಳಿಸಲಾಗಿದೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 2 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ತಲಾ 5 ಕೋಟಿ ರು. ಬಿಡುಗಡೆಗೊಳಿಸಲಾಗಿದೆ. ಮಂಗಳೂರು ವಿವಿ ಆವರಣದಲ್ಲಿ 1000 ವಿದ್ಯಾರ್ಥಿಗಳ ಸಾಮರ್ಥ್ಯದ ಬಹುಮಹಡಿಯ ಹಾಸ್ಟೆಲ್ ಸಮುಚ್ಛಯ ಕಟ್ಟಡ ನಿರ್ಮಾಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ 82 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. ಇಲ್ಲಿ 500 ವಿದ್ಯಾರ್ಥಿ ಹಾಗೂ 500 ವಿದ್ಯಾರ್ಥಿನಿಯರಿಗೆ ಅವಕಾಶವಿದೆ ಎಂದು ಖಾದರ್ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರಿನ ಕದ್ರಿ, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ತಲಾ 6.50 ಕೋಟಿ ರು. ವೆಚ್ಚದ ಹಾಸ್ಟೆಲ್ ಕಟ್ಟಡಗಳು ಮಂಜೂರಾಗಿ, ಕಾಮಗಾರಿ ಪೂರ್ಣಗೊಂಡಿದೆ. ಪುತ್ತೂರಿನ ಬನ್ನೂರಿನಲ್ಲಿ ಪರಿಶಿಷ್ಟ ಜಾತಿ ಬಾಲಕಿಯರ ಹಾಗೂ ಕಾವೂರಿನಲ್ಲಿ ಪರಿಶಿಷ್ಟ ಪಂಗಡದ ಬಾಲಕಿಯರ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ತಲಾ 7 ಕೋಟಿ ರು. ಮಂಜೂರಾಗಿದೆ ಎಂದು ಹೇಳಿದರು.

ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ರು. ಮಂಜೂರುಗೊಂಡಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ 4 ಕೋಟಿ ರು. ವೆಚ್ಚದಲ್ಲಿ ಹಾಗೂ ಪುತ್ತೂರಿನಲ್ಲಿ 3 ಕೋಟಿ ರು. ವೆಚ್ಚದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್ ಏಕಗ್ರಾಮ ಕುಡಿಯುವ ನೀರಿನ ಯೋಜನೆಯಡಿ 573 ಕೋಟಿ ರು. ವೆಚ್ಚದಲ್ಲಿ 700 ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 665 ಕಾಮಗಾರಿಗಳು ಪೂರ್ಣಗೊಂಡಿವೆ. 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು 1926 ಕೋಟಿ ರು.ಗೆ ಅನುಮೋದನೆಗೊಂಡಿದ್ದು, ಈ ಪೈಕಿ ಮೂಡುಬಿದಿರೆ ಮತ್ತು ಉಳಾಯಿಬೆಟ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 5 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು 7 ಮಲತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯಾರಂಭಗೊಂಡಿದ್ದು, ಇದಕ್ಕಾಗಿ 6.38 ಕೋಟಿ ರು. ಅನುದಾನ ವಿನಿಯೋಗಿಸಲಾಗುತ್ತಿದೆ. ಕರಾವಳಿಯ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ‘ಕೆ-ಶೋರ್’ ಯೋಜನೆಯನ್ನು ಕರ್ನಾಟಕ ಸರಕಾರವು ವಿಶ್ವಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸುತ್ತಿದ್ದು, ಪ್ರಥಮ ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಂ.ಆರ್.ಎಫ್. ಘಟಕಗಳ ನಿರ್ಮಾಣ, ವಾಹನ ಖರೀದಿ, ಫ್ಲೋಟಿಂಗ್ ಟ್ರಾಶ್ ಬ್ಯಾರಿಯರ್‌ಗಳ ಅಳವಡಿಕೆಗಾಗಿ 22.40 ಕೋಟಿ ರು. ಅನುದಾನ ಮಂಜೂರುಗೊಂಡಿದೆ.

ಜಿಲ್ಲಾದ್ಯಂತ ಭೂಕುಸಿತ, ಗುಡ್ಡ ಕುಸಿತದಂತಹ ಅನಾಹುತಗಳನ್ನು ತಪ್ಪಿಸಲು ಈಗಾಗಲೇ 85 ಕೋಟಿ ವೆಚ್ಚದಲ್ಲಿ 234 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. 2026-27ನೇ ಸಾಲಿನಲ್ಲಿ ಉಳ್ಳಾಲ ತಾಲೂಕಿನ ಕಲ್ಲರಕೋಡಿ ಮತ್ತು ವಿಟ್ಲದಲ್ಲಿ ಹೊಸದಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಕಲ್ಲಾಪುವಿನಲ್ಲಿ ಅಲ್ಪಸಂಖ್ಯಾತರ ಮಹಿಳಾ ಪದವಿಪೂರ್ವ ಕಾಲೇಜು ಪ್ರಾರಂಭಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೇಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿ.ಪಂ. ಸಿಇಒ ನರ್ವಡೆ ವಿನಾಯಕ್ ಕರ್ಭಾರಿ, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಇದ್ದರು.

ಉನ್ನತ ಸ್ಥಾನಕ್ಕೇರುವ ಹಠ, ಕನಸು ಇರಲಿ: ಖಾದರ್

40-45 ವರ್ಷಗಳ ಹಿಂದೆ ನಾನು ಇದೇ ನೆಹರೂ ಮೈದಾನದ ಕೊನೆಯ ಸಾಲಿನಲ್ಲಿ ಸ್ಕೌಟ್ಸ್ ಸಮವಸ್ತ್ರ ಧರಿಸಿ ನಿಂತಿದ್ದ ಸಾಮಾನ್ಯ ಶಾಲಾ ವಿದ್ಯಾರ್ಥಿಯಾಗಿದ್ದೆ. ಅಂದು ಅಲ್ಲಿ ನಿಂತಿದ್ದ ಯು.ಟಿ. ಖಾದರ್ ಇಂದು ರಾಜ್ಯದ ಸಚಿವನಾಗಿ, ಸ್ಪೀಕರ್ ಆಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದೆ. ಇಂದು ಇಲ್ಲಿ ಪಥಸಂಚಲನದಲ್ಲಿ ನಿಂತಿರುವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಆ ಶಕ್ತಿ ಇದೆ. ನೀವೇ ಭವಿಷ್ಯದ ಭಾರತದ ಶಿಲ್ಪಿಗಳು. ಕೇವಲ ಚಪ್ಪಾಳೆ ತಟ್ಟುವುದು ಮಾತ್ರವಲ್ಲ, ಮುಂದಿನ 10-15 ವರ್ಷಗಳಲ್ಲಿ ನಮಗಿಂತ ಉನ್ನತ ಸ್ಥಾನಕ್ಕೇರುವ ಹಠ ಮತ್ತು ಕನಸನ್ನು ನೀವು ಹೊಂದಬೇಕು ಎಂದು ಸಚಿವ ಖಾದರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here