ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮಂಗಳೂರಿನಲ್ಲಿ ಬಿಎಂಎಸ್ ಬೃಹತ್ ಪ್ರತಿಭಟನೆ

ಮಂಗಳೂರು: ವಿವಿಧ ವಲಯಗಳ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ರಾಜಾಜಿ ಪಾರ್ಕ್‌ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಬಿಎಂಎಸ್ ಕೇಂದ್ರ ಕಾರ್ಯಾಂಗ ಸಮಿತಿಯ ನಿರ್ದೇಶನದಂತೆ ದೇಶಾದ್ಯಂತ ಆಯೋಜಿಸಲಾದ ಈ ಹೋರಾಟದಲ್ಲಿ ಜಿಲ್ಲೆಯ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

​ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅತ್ಯಗತ್ಯ: ಸತೀಶ್ ಶೆಟ್ಟಿ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ದೇಶದ ಒಟ್ಟು ಶ್ರಮಿಕ ವರ್ಗದಲ್ಲಿ ಶೇ.94ರಷ್ಟು ಜನರು ಅಸಂಘಟಿತ ವಲಯದಲ್ಲಿದ್ದಾರೆ. ಸರ್ಕಾರಗಳು ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತವೆ, ಆದರೆ ಈ ಶೇ. 94ರಷ್ಟು ಅಸಂಘಟಿತ ಕಾರ್ಮಿಕರ ಉದ್ಯೋಗ ಭದ್ರತೆ ಹಾಗೂ ಸೌಲತ್ತುಗಳನ್ನು ಗಮನಿಸದಿದ್ದರೆ ಬಡತನ ನಿರ್ಮೂಲನೆ ಸಾಧ್ಯವಿಲ್ಲ ಎಂದರು.

​ಕರ್ನಾಟಕ ಸರ್ಕಾರ ಮೇ ತಿಂಗಳಿನಲ್ಲಿ ಕನಿಷ್ಠ ಮಾಸಿಕ ವೇತನವನ್ನು ₹31,000ಕ್ಕೆ ಹೆಚ್ಚಿಸಿ ಹೊರಡಿಸಿರುವ ಅಧಿಸೂಚನೆ ಶ್ಲಾಘನೀಯ. ಆದರೆ ಯಾವುದೇ ಬಂಡವಾಳಶಾಹಿಗಳ ಅಥವಾ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯಬಾರದು. ಈ ವಿಚಾರದಲ್ಲಿ ಕರ್ನಾಟಕವನ್ನು ಇಡೀ ದೇಶಕ್ಕೆ ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ದೇಶಾದ್ಯಂತ ಎಲ್ಲ ರಂಗದ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹30,000 ವೇತನ ನಿಗದಿಪಡಿಸಬೇಕು. ಇಎಸ್‌ಐ ಸೌಲಭ್ಯದ ಆದಾಯ ಮಿತಿಯನ್ನು ₹21,000ರಿಂದ ₹42,000ಕ್ಕೆ ಹಾಗೂ ಪಿಎಫ್‌ ಕಡಿತದ ವೇತನ ಮಿತಿಯನ್ನು ₹15,000ದಿಂದ ₹30,000ಕ್ಕೆ ಹೆಚ್ಚಿಸಬೇಕು. ಇಪಿಎಸ್-95 ಯೋಜನೆ ಅಡಿಯಲ್ಲಿ ನೀಡಲಾಗುವ ಕನಿಷ್ಠ ಪಿಂಚಣಿಯನ್ನು ₹7,500ಕ್ಕೆ ಏರಿಸಿ, ಅದಕ್ಕೆ ತುಟ್ಟಿಭತ್ಯೆ ಸೇರಿಸಬೇಕು. ಆಶಾ, ಅಂಗನವಾಡಿ ಹಾಗೂ ಬಿಸಿಊಟ ಕಾರ್ಯಕರ್ತೆಯರನ್ನು ಕಾಯಂಗೊಳಿಸಿ, ಸೂಕ್ತ ವೇತನ ಹಾಗೂ ಪಿಂಚಣಿ ಸೌಲಭ್ಯ ನೀಡಬೇಕು. ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಬೀಡಿ, ರಬ್ಬರ್ ಕಾರ್ಮಿಕರು ಹಾಗೂ ರಸ್ತೆಬದಿ ವ್ಯಾಪಾರಿಗಳಿಗೆ ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಕಾಯಂ ನೌಕರರಷ್ಟೇ ವೇತನ ನೀಡಬೇಕು. ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳುಗಾರಿಕೆ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಸತೀಶ್ ಶೆಟ್ಟಿ ಒತ್ತಾಯಿಸಿದರು.

​ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ: ಅನಿಲ್ ಕುಮಾರ್

ಬಿಎಂಎಸ್ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ದಿನ ತಡವಾಗಿ ಪ್ರತಿಭಟನೆ ನಡೆಸಿದ್ದರೂ, ಕಾರ್ಮಿಕರ ಬೃಹತ್ ಭಾಗವಹಿಸುವಿಕೆ ಹೋರಾಟಕ್ಕೆ ಆನೆಬಲ ತಂದಿದೆ. ಬಿಎಂಎಸ್ ಕಾರ್ಮಿಕರ ಹಕ್ಕುಗಳ ಈಡೇರಿಕೆಗೆ ಸದಾ ಮಂಚೂಣಿಯಲ್ಲಿ ನಿಂತು ಹೋರಾಡಲಿದೆ ಎಂದರು.

​ಸಮಾವೇಶದಲ್ಲಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಮುಖಂಡರಾದ ರೋಹಿತಾಶ್ವ, ಜಯರಾಜ್ ಸಾಲಿಯಾನ್, ವಸಂತ್ ಕುಮಾರ್ ಮಣಿಹಳ್ಳ, ನಳಿನಿ ಅಡ್ಯಾರ್, ಉದಯ ಕುಮಾರ್ ಬಿ.ಸಿ., ಕುಮಾರನಾಥ ಶೆಟ್ಟಿ ಕಲ್ಮಂಜ, ಭಗವಾನ್ ದಾಸ್, ವಿಘ್ನೇಶ್, ಗೀತಾ ಧರ್ಮರಾಜ್, ತುಳಸಿ ದೇವರಾಜ್, ಡೀಲಾಕ್ಷಿ, ಪುರಂದರ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಮಿಕರು ಇದ್ದರು.

LEAVE A REPLY

Please enter your comment!
Please enter your name here