ಕಟೀಲು ಮೇಳ ಯಕ್ಷಗಾನ ಕುರಿತು ಅಪಪ್ರಚಾರ: ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ

ಮೂಲ್ಕಿ: ಕಟೀಲು ಯಕ್ಷಗಾನ ಮೇಳದ ವಿರುದ್ಧದ ಅಪಪ್ರಚಾರ ಖಂಡಿಸಿ, ಕ್ಷೇತ್ರದ ಪವಿತ್ರತೆಯನ್ನು ಎತ್ತಿ ಹಿಡಿಯಲು ವಿಶ್ವ ಹಿಂದೂ ಪರಿಷತ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾತನಾಡಿ, ಯಕ್ಷಗಾನದ ಬಗ್ಗೆ ಅಪಪ್ರಚಾರ ಮಾಡುವವರರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ತಿನ ಸೇವಾ ಪ್ರಮುಖ್‌ ಗೋಪಾಲ್‌ ಕುತ್ತಾರ್‌ ಮಾತನಾಡಿ, ದಶಕಗಳಿಂದ ಕಟೀಲು ಮೇಳವು ಸರ್ವ ಸಮಾಜದ ಭಕ್ತರ ಮನೆಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಆಟಗಳನ್ನು ಆಡಿಸಿಕೊಂಡು ಬಂದಿದೆ. ಇಲ್ಲಿ ಜಾತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೇಳದ ಸೇವೆಯ ಮೇಲೆ ಕಳಂಕ ತಂದು ಭಕ್ತರ ನಡುವೆ ವೈಷಮ್ಯ ಸೃಷ್ಟಿಸಲು ಹುನ್ನಾರ ನಡೆಸಲಾಗುತ್ತಿದೆ. ಇದಕ್ಕೆ ಕಿವಿಗೊಡಬಾರದು ಎಂದರು. ವಿಹಿಂಪ ನಾಯಕರಾದ ನಿತ್ಯಾನಂದ ಮೆಂಡನ್‌, ಗಿರೀಶ್‌ ತಂತ್ರಿ, ಕಿನ್ನಿಗೋಳಿ ಪಂಚಾಯ್ತಿ ಅಧ್ಯಕ್ಷ ಗುರುರಾಜ್‌ ಮಲ್ಲಿಗೆಯಂಗಡಿ, ಬಿಜೆಪಿಯ ಸುದರ್ಶನ್‌ ಮೂಡುಬಿದಿರೆ, ಕೆ. ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಈಶ್ವರ್‌ ಕಟೀಲು, ಅಭಿಲಾಷ್‌ ಶೆಟ್ಟಿ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here