


ಮಂಗಳೂರು: ರಾಜ್ಯದಲ್ಲಿ ಬರಗಾಲ, ಅತಿವೃಷ್ಟಿ ಹಾಗೂ ಕುಡಿಯುವ ನೀರಿನ ಅಭಾವದಂತಹ ಗಂಭೀರ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸಬೇಕಿದ್ದ ವಿಧಾನಮಂಡಲ ಕಲಾಪವನ್ನು ವಿಪಕ್ಷ ಬಿಜೆಪಿ ಗದ್ದಲದ ಮೂಲಕ ಅಸ್ತವ್ಯಸ್ತಗೊಳಿಸಿದೆ. ಅವರ ರಾಜಕೀಯಕ್ಕಾಗಿ ಕಲಾಪವನ್ನು ಹಾಳು ಮಾಡಿದ್ದು ಬಿಜೆಪಿಯವರು ಜನರಿಗೆ ಎಸಗಿದ ದ್ರೋಹ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಾವಳಿ ಪ್ರಕಾರ ಯಾವುದೇ ನೋಟಿಸ್ ನೀಡದೆ ಅಧಿವೇಶನ ಹಾಳುಗೆಡವುವುದೇ ವಿಪಕ್ಷದ ಮುಖ್ಯ ಉದ್ದೇಶವಾಗಿತ್ತು. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಮತ್ತು ಹತ್ತು ದಿನಗಳ ಕಲಾಪದ ಅಮೂಲ್ಯ ಸಮಯ ಪೋಲಾಗಿದೆ ಎಂದರು.


ವಾಲ್ಮೀಕಿ ನಿಗಮ ಹಗರಣ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದ್ದರು. ತನಿಖಾ ಸಂಸ್ಥೆ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ವಂಚನೆಯಾಗಿದ್ದ ಶೇ. 99.5ರಷ್ಟು ಹಣವನ್ನು ಸರ್ಕಾರ ಯಶಸ್ವಿಯಾಗಿ ವಾಪಸ್ ಪಡೆದು ಇಲಾಖೆಯ ಖಾತೆಗೆ ಜಮಾ ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಸಿಬಿಐ ಹಾಗೂ ಇಡಿ ಪ್ರಕರಣ ಎದುರಿಸುತ್ತಿರುವ ಹಲವು ಬಿಜೆಪಿ ನಾಯಕರು ಸಚಿವರಾಗಿ ಮತ್ತು ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ಎಸ್ಐಟಿ ಕ್ಲೀನ್ ಚಿಟ್ ನೀಡಿದ್ದರೂ ರಾಜಕೀಯ ಲಾಭಕ್ಕಾಗಿ ವಿಪಕ್ಷಗಳು ಗದ್ದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.


ರಾಜಕೀಯ ಜಿದ್ದಾಜಿದ್ದಿಗಳನ್ನು ಬೀದಿಯಲ್ಲಿ ಅಥವಾ ಪಾದಯಾತ್ರೆಗಳ ಮೂಲಕ ನಡೆಸಲಿ; ಶಾಸನಸಭೆಯ ಒಳಗಡೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಕಷ್ಟ-ಸುಖಗಳ ಕುರಿತು ಮಾತ್ರ ಚರ್ಚೆಯಾಗಬೇಕು ಎಂದು ಯು.ಟಿ. ಖಾದರ್ ಸಲಹೆ ನೀಡಿದರು.







