ಆಹಾರ ಸುರಕ್ಷತೆ ತಪಾಸಣೆಗೆ ಜಿಲ್ಲೆ, ತಾಲೂಕು ಮಟ್ಟದ ಮೇಲ್ವಿಚಾರಣಾ ತಂಡ: ಸಚಿವ ಯು.ಟಿ. ಖಾದರ್

ಮಂಗಳೂರು: ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಡೆಸುವ ತಪಾಸಣೆಗಳಿಗೆ ನೆರವಾಗಲು ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ತಂಡಗಳನ್ನು (ವಾಚ್ ಟೀಮ್) ರಚಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ಆಸಕ್ತಿಯಿರುವ ನಿವೃತ್ತ ಅಧಿಕಾರಿಗಳನ್ನು, ವಿಷಯ ಕುರಿತು ಆಸಕ್ತಿ ಇರುವ ಸಾರ್ವಜನಿಕರನ್ನು ಈ ತಂಡಗಳಲ್ಲಿ ಸೇರ್ಪಡೆಗೊಳಿಸಲಾಗುವುದು. ಅವರಿಗೆ ತಪಾಸಣೆ ನಡೆಸುವ ಕೆಲವು ಅಧಿಕಾರಗಳನ್ನು ನೀಡುವ ಕುರಿತು ಹಾಗೂ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹೇಗೆ ಜಾರಿಗೊಳಿಸಬಹುದು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದರು.

ಕ್ಯೂ ಆರ್ ಕೋಡ್ ಮೂಲಕ ದೂರು ದಾಖಲಿಸಿ:

ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ನಾಗರಿಕ ಸಮಾಜದ ಬೆಂಬಲವಿಲ್ಲದೆ ಹೆಚ್ಚಿನ ಸಾಧನೆ ಮಾಡುವುದು ಕಷ್ಟ. ಹೀಗಾಗಿ ಕ್ಯೂಆರ್ ಕೋಡ್ ಆಧಾರಿತ ದೂರು ಸ್ವೀಕಾರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವುದೇ ಹೊಟೇಲ್, ಬೀದಿ ಬದಿ ಆಹಾರ ಅಥವಾ ಔಷಧಗಳ ಕುರಿತು ಯಾವುದೇ ಆತಂಕ ಅಥವಾ ಸಂಶಯವಿದ್ದರೆ ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸಿ ದೂರು ದಾಖಲಿಸಬಹುದು ಎಂದು ಸಚಿವ ಖಾದರ್ ಹೇಳಿದರು.

ಹೊಟೇಲ್‌ಗಳು, ಉಪಹಾರ ಗೃಹಗಳಲ್ಲಿ ನಡೆಸಲಾಗುತ್ತಿರುವ ದಾಳಿ ಹಾಗೂ ತಪಾಸಣೆಗಳು ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವುದಲ್ಲ. ಹೋಟೆಲ್ ಮಾಲೀಕರಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಜತೆಗೆ, ಹೊರಗೆ ಆಹಾರ ಸೇವಿಸುವಾಗ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂಬುದನ್ನು ಉತ್ತೇಜಿಸುವುದಾಗಿದೆ ಎಂದರು.

ಕೇಂದ್ರಕ್ಕೆ ವರದಿ:

ಶೀಘ್ರದಲ್ಲೇ ದೇಶಾದ್ಯಂತದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರ್ನಾಟಕದಲ್ಲಿ ಕರೆಯಲಾಗುವುದು. ಸಭೆಯಲ್ಲಿ ಬರುವ ಅಭಿಪ್ರಾಯಗಳ ಆಧಾರದ ಮೇಲೆ, ಪ್ರಸ್ತುತ ಇರುವ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಹೊಟೇಲ್ ಸಂಘಟನೆಗಳು ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಿ, ಬಳಿಕ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಹೊಟೇಲ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವ ಕುರಿತು ಪ್ರಸ್ತಾಪಿಸಿದ ಸಚಿವ ಖಾದರ್, ಬಳಸಿದ ಎಣ್ಣೆಯನ್ನು ಬಯೋ ಡೀಸೆಲ್ ಆಗಿ ಪರಿವರ್ತಿಸಲು ಕೆಲವು ಕಂಪೆನಿಗಳು ಮುಂದೆ ಬಂದಿವೆ. ಬಳಸಿದ ಅಡುಗೆ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡಲು ಈ ಕಂಪೆನಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದರು.

ಈ ಹಿಂದೆ ಹೊರಡಿಸಲಾಗಿದ್ದ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮತ್ತು ಹಿಂದಿ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಸೇರಿಸಿರಲಿಲ್ಲ. ಈಗ ಅಧಿಸೂಚನೆಗೆ ತಿದ್ದುಪಡಿ ತರಲಾಗಿದ್ದು, ಉರ್ದು ಮಾಧ್ಯಮ ಶಾಲೆಗಳಿಗೆ 800 ಮತ್ತು ಹಿಂದಿ ಮಾಧ್ಯಮ ಶಾಲೆಗಳಿಗೆ 200 ಶಿಕ್ಷಕರ ನೇಮಕಾತಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.

——–

ಯುಟಿ ಖಾದರ್ ಫೈಲ್ ಫೋಟೊ

LEAVE A REPLY

Please enter your comment!
Please enter your name here