


ಮಂಗಳೂರು: ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುತ್ತೇವೆ, ಪೂರ್ತಿ ಅಲ್ಲ ಎಂದು ಹೇಳಿ ಪ್ರಜಾಪ್ರಭುತ್ವದ ದೇಗುಲ ಸಂಸತ್ತು ಅಂಗೀಕರಿಸಿರುವ ಕಾನೂನನ್ನು ಕೇವಲ ಓಲೈಕೆ ರಾಜಕಾರಣಕ್ಕೆ ವಿರೋಧಿಸುತ್ತಿರುವುದು ಕಾಂಗ್ರೆಸಿನ ದೇಶ ವಿರೋಧಿ ಮನಸ್ಥಿತಿ ಹಾಗೂ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.


ವಂದೇ ಮಾತರಂ ಕೇವಲ ನಾಲ್ಕು ಸಾಲುಗಳ ಹಾಡಲ್ಲ. ಅದು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಗಲ್ಲಿಗೇರುವಾಗಲೂ ಮೊಳಗಿಸಿದ ಪವಿತ್ರ ಮಂತ್ರ. ಬ್ರಿಟಿಷರ ಲಾಠಿ, ಬಂದೂಕುಗಳಿಗೂ ಜಗ್ಗದ ಹೆಮ್ಮೆಯ ಗೀತೆಯನ್ನು ಕಾಂಗ್ರೆಸ್ ಕೇವಲ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ದೇಶದ ಏಕತೆಯನ್ನು ವಿಭಜಿಸುವವರು ಯಾವುದೇ ಕ್ಷಮೆಗೆ ಅರ್ಹರಲ್ಲ ಎಂದರು.


ಸ್ವಾತಂತ್ರ್ಯ ಪೂರ್ವದಲ್ಲಿ ಓಲೈಕೆಗಾಗಿ ವಂದೇ ಮಾತರಂಗೆ ಕತ್ತರಿ ಹಾಕಿ ಕಾಂಗ್ರೆಸ್ ಪ್ರಮಾದ ಎಸಗಿತ್ತು. ಇತಿಹಾಸದಲ್ಲಿ ಆದ ತಪ್ಪುಗಳನ್ನು ನರೇಂದ್ರ ಮೋದಿ ಸರ್ಕಾರ ಒಂದೊಂದಾಗಿ ಸರಿಪಡಿಸುತ್ತಿರುವ ಈ ಸಂದರ್ಭದಲ್ಲಿಯೂ ಕಾಂಗ್ರೆಸ್ ಮತ್ತೆ ತುಷ್ಟೀಕರಣಕ್ಕೆ ಇಳಿದು ದೇಶದ ಕಾನೂನಿಗೆ ಸವಾಲು ಹಾಕುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.









