


ಮಂಗಳೂರು: ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 21 ಬಾಂಗ್ಲಾದೇಶಿ ಪ್ರಜೆಗಳನ್ನು ಗಡೀಪಾರು ಮಾಡುವ ಪ್ರಕ್ರಿಯೆ ಚುರುಕುಗೊಂಡಿದ್ದು, ಇವರನ್ನು ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಲು 30 ಪೊಲೀಸ್ ಸಿಬ್ಬಂದಿಯ ವಿಶೇಷ ತಂಡವು ಪಶ್ಚಿಮ ಬಂಗಾಳಕ್ಕೆ ತೆರಳಲಿದೆ.


ಕಟ್ಟುನಿಟ್ಟಿನ ಭದ್ರತೆಯಲ್ಲಿ 21 ಬಾಂಗ್ಲಾ ಪ್ರಜೆಗಳನ್ನು ಮಂಗಳೂರಿನಿಂದ ಬಸ್ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಭಾನುವಾರ ರೈಲಿನಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಕರೆದೊಯ್ಯಲಾಗುವುದು.


ಮಾಲ್ಡಾ ತಲುಪಿದ ನಂತರ ವಶದಲ್ಲಿರುವವರನ್ನು ಗಡಿ ಭದ್ರತಾ ಪಡೆಗೆ ಅಧಿಕೃತವಾಗಿ ಒಪ್ಪಿಸಲಾಗುತ್ತದೆ. ಅಲ್ಲಿಂದ ಬಿಎಸ್ಎಫ್ ಅಧಿಕಾರಿಗಳು ಮುಂದಿನ ಕಾನೂನುಬದ್ಧ ಗಡೀಪಾರು ಕ್ರಮಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಸಂಪೂರ್ಣ ಕಾರ್ಯಾಚರಣೆಯನ್ನು ಆಗಸ್ಟ್ 26ರ ಒಳಗಾಗಿ ಯಶಸ್ವಿಯಾಗಿ ಮುಕ್ತಾಯಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.










