


ಮಂಗಳೂರು: ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಗೌರವದಿಂದ ಹಾಡುತ್ತಾ ಬಂದಿದೆ. ಕಾಂಗ್ರೆಸ್ ಅಧಿವೇಶನಗಳು, ವಿವಿಧ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ಕಚೇರಿಗಳಲ್ಲಿಯೂ ವಂದೇ ಮಾತರಂ ಹಾಡಲಾಗುತ್ತದೆ. ಆದರೆ, ಇದೀಗ ಬಿಜೆಪಿ ವಂದೇ ಮಾತರಂ ಗೀತೆಯನ್ನು ರಾಜಕೀಯಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.


ವಂದೇ ಮಾತರಂ ಕುರಿತು ಕಾಂಗ್ರೆಸ್ಗೆ ಬುದ್ಧಿ ಹೇಳುವ ಮೊದಲು ಆರೆಸ್ಸೆಸ್ ಮತ್ತು ಬಿಜೆಪಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಆರೆಸ್ಸೆಸ್ ಕಚೇರಿಗಳಲ್ಲಿ ವಂದೇ ಮಾತರಂ ಹಾಡಲಾಗುತ್ತದೆಯೇ? ದೇಶದ ತ್ರಿವರ್ಣ ಧ್ವಜದ ಬಗ್ಗೆ ಆರೆಸ್ಸೆಸ್ ಮತ್ತು ಬಿಜೆಪಿಗೆ ನಿಜವಾದ ಗೌರವವಿದ್ದರೆ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ನಿಯಮಿತವಾಗಿ ಹಾರಿಸಲು ಪ್ರಾರಂಭಿಸಿದ ದಿನವನ್ನು ತಿಳಿಸಲಿ ಎಂದರು.


ಸಂಘ ಗೀತೆಗೆ ಮಾತ್ರ ಸೀಮಿತವಾಗದೆ ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಗೀತೆಗಳಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ನಂತರ ಕಾಂಗ್ರೆಸ್ಗೆ ದೇಶಭಕ್ತಿಯ ಪಾಠ ಹೇಳಲು ಬರಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಅಥವಾ ಜನಸಂಘದವರು ವಹಿಸಿದ ಪಾತ್ರವೇನು ಎಂಬುದನ್ನು ಬಿಜೆಪಿ ಮೊದಲು ದೇಶದ ಮುಂದೆ ಸ್ಪಷ್ಟಪಡಿಸಲಿ. ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ಅಥವಾ ಜನಸಂಘದ ಒಬ್ಬರಾದರೂ ಪ್ರಾಣತ್ಯಾಗ ಮಾಡಿದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಹರೀಶ್ ಕುಮಾರ್ ಸವಾಲು ಹಾಕಿದರು.










