ಜಿಲ್ಲೆಯ ಪ್ರಥಮ ಪ್ಲಾಸ್ಟಿಕ್ ಪಾರ್ಕ್ ಅಕ್ಟೋಬರ್ ಅಂತ್ಯಕ್ಕೆ ಉದ್ಘಾಟನೆ: ಸಂಸದ ಕ್ಯಾ.ಚೌಟ – ಮಂಗಳೂರಿನಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆ

ಮಂಗಳೂರು: ತಾಲೂಕಿನ ಗಂಜಿಮಠದಲ್ಲಿ ದಕ್ಷಿಣ ಕನ್ನಡದ ಪ್ರಥಮ ಪ್ಲಾಸ್ಟಿಕ್ ಪಾರ್ಕ್‌ನ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಯೋಜಿತ ಅವಧಿಯೊಳಗೆ ಪೂರ್ಣಗೊಂಡರೆ ಅಕ್ಟೋಬರ್ ಅಂತ್ಯದ ವೇಳೆಗೆ ಉದ್ಘಾಟನೆ ನೆರವೇರಿಸಲಾಗುವುದು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಪಾರ್ಕ್‌ನಲ್ಲಿ ರಸ್ತೆ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಡಾಂಬರೀಕರಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬೀದಿ ದೀಪ ಮತ್ತು ಒಳಚರಂಡಿ ಕಾಮಗಾರಿ, ಸಂಸ್ಕರಣಾ ಘಟಕದ ಕೆಲಸವೂ ಪೂರ್ಣಗೊಂಡಿದೆ. ಸಿಪೆಟ್ ಆಡಳಿತ ಕಟ್ಟಡದಲ್ಲಿ ನೆಲಹಾಸು, ಬಣ್ಣ ಬಳಿಯುವುದು ಮತ್ತು ಕಿಟಕಿಗಳ ಅಳವಡಿಕೆ ಇನ್ನೂ ಪೂರ್ಣಗೊಂಡಿಲ್ಲ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲ ಕೆಲಸ ಪೂರ್ಣಗೊಳಿಸಲು ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ಲಾಸ್ಟಿಕ್ ಪಾರ್ಕ್‌ನಲ್ಲಿ 48 ಅಭಿವೃದ್ಧಿಪಡಿಸಿದ ಸ್ಥಳಗಳು ಹಂಚಿಕೆಗೆ ಸಿದ್ಧವಾಗಿವೆ ಎಂದು ಡಿಐಸಿ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಹೇಳಿದರು. ಪ್ರಧಾನ ಕಾರ್ಯದರ್ಶಿ ನೇತೃತ್ವದ ರಾಜ್ಯ ಮಟ್ಟದ ಪರಿಶೀಲನಾ ಸಮಿತಿಯು ಸೆಪ್ಟೆಂಬರ್‌ನಲ್ಲಿ ಸಭೆ ಕರೆದು ನಿವೇಶನಗಳ ಹಂಚಿಕೆಯನ್ನು ಪರಿಗಣಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ನಿವೇಶನಗಳಿಗಾಗಿ 16 ಅರ್ಜಿಗಳು ಬಂದಿವೆ ಎಂದರು.

ವಿಬಿ-ಜಿ ರಾಮ್ ಜಿಯಲ್ಲಿ 18,000 ಕಾಮಗಾರಿ:

ಜಿಲ್ಲಾ ಪಂಚಾಯ್ತಿ ಸಿಇಒ ನರ್ವಾಡೆ ವಿನಾಯಕ್ ಕಾರ್ಭಾರಿ ಮಾತನಾಡಿ, ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 968 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿಬಿ- ಜಿ ರಾಮ್ ಜಿ ಯೋಜನೆಯಡಿ ವರ್ಷದಲ್ಲಿ 18,000 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ. ಇವುಗಳಲ್ಲಿ ಸುಮಾರು 9,000 ಕಾಮಗಾರಿಗಳು ತೋಟಗಾರಿಕೆ ವಲಯಕ್ಕೆ ಸಂಬಂಧಿಸಿವೆ ಎಂದು ಹೇಳಿದರು.

ಈ ಯೋಜನೆಯಡಿ 15 ಲಕ್ಷ ವ್ಯಕ್ತಿ- ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಗತಿಗೆ ತೊಂದರೆಯಾಗಿದೆ. ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಇಒ ಹೇಳಿದರು.

ಕೊರಗ ವಸತಿಗಾಗಿ ಕ್ರಿಯಾ ಯೋಜನೆ:

ಅರ್ಹ ಕೊರಗ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಂಸದ ಕ್ಯಾ. ಚೌಟ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಕ್ಷಿಣ ಕನ್ನಡದಲ್ಲಿ 1,135 ಕೊರಗ ಕುಟುಂಬಗಳಿದ್ದು, ಅವೆಲ್ಲವನ್ನೂ ಪಿಎಂ- ಜನ್ ಮನ್ ಅಡಿಯಲ್ಲಿ ಮ್ಯಾಪ್ ಮಾಡಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಬಸವರಾಜು ಹೇಳಿದರು. ಪಿಎಂ- ಜನ್ ಮನ್ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ 165 ಫಲಾನುಭವಿಗಳ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದೆ, 124 ಅರ್ಜಿಗಳು ಅನುಮೋದನೆಗಾಗಿ ಕಾಯುತ್ತಿವೆ. ವಸತಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಯಾವುದೇ ಆರ್ಥಿಕ ನಿರ್ಬಂಧಗಳಿಲ್ಲ. ಆದರೂ ಈಗಾಗಲೇ ಮನೆ ನಿರ್ಮಾಣಕ್ಕೆ ಅನುಮೋದನೆ ಪಡೆದ ಕೆಲವು ಫಲಾನುಭವಿಗಳು ಕೆಲಸ ಆರಂಭಿಸಲು ಮುಂದೆ ಬಂದಿಲ್ಲ ಎಂದು ಹೇಳಿದರು.

ನಿರ್ಮಾಣ ಸಾಮಗ್ರಿಗಳ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಮಂಜೂರಾದ 4.5 ಲಕ್ಷ ರು. ಮೊತ್ತವು ಮನೆ ನಿರ್ಮಿಸಲು ಸಾಕಾಗುವುದಿಲ್ಲ ಎಂದು ದಿಶಾ ಸಮಿತಿ ಸದಸ್ಯ ಭರತ್ ಕುಮಾರ್ ಗಮನ ಸೆಳೆದರು.

ಬಿ.ಸಿ. ರೋಡ್- ಸುರತ್ಕಲ್ ಬೈಪಾಸ್ ಯೋಜನೆ:

ಬಿ.ಸಿ. ರೋಡ್ ಮತ್ತು ಸುರತ್ಕಲ್ ಸಂಪರ್ಕಿಸುವ ಬೈಪಾಸ್ ರಸ್ತೆಯನ್ನು ಯೋಜಿಸಲಾಗುತ್ತಿದ್ದು, ಅದಕ್ಕಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮ ಹಂತದಲ್ಲಿದೆ ಎಂದು ಕ್ಯಾ. ಚೌಟ ತಿಳಿಸಿದರು.

ಜಲಾಭಿಮುಖಿ ಯೋಜನೆ ಶೇ.68 ಪೂರ್ಣ:

ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಜಾರಿಗೆ ತರುತ್ತಿರುವ ಜಲಾಭಿಮುಖಿ ಯೋಜನೆಯ ಶೇ.68 ಕಾಮಗಾರಿ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು. ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ಕಾಮಗಾರಿಯ 80% ಕೆಲಸ ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ರಸ್ತೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here