ಜೆನ್ ಝೀ ತಲುಪಲು ಬಿಜೆಪಿ ಹೊಸ ಕಾರ್ಯತಂತ್ರ – ಮಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಂ. ನಾಗರಾಜ್

ಮಂಗಳೂರು: ಮುಂಬರುವ ದಿನಗಳಲ್ಲಿ ದೇಶದ ಯುವ ಜನತೆಯನ್ನು ತಲುಪಲು ಮತ್ತು ಅವರ ಬೇಕು-ಬೇಡಗಳನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಬಿಜೆಪಿ ‘ಹೊಸ ಆಯಾಮ’ ಕಲ್ಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಂ. ನಾಗರಾಜ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

​ದೇಶದಲ್ಲಿ ಅಂಗನವಾಡಿ ಹಂತದಿಂದ ಹಿಡಿದು 25 ಕೋಟಿಗೂ ಹೆಚ್ಚು ಯುವ ಸಮುದಾಯವಿದ್ದು, 13 ವರ್ಷದವರೆಗಿನ ಮಕ್ಕಳು ಹಾಗೂ 13ರಿಂದ 20 ವರ್ಷದ ಯುವಕರು ಎಂಬ ಎರಡು ಪ್ರತ್ಯೇಕ ಗುಂಪುಗಳನ್ನು ಮಾಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

​ಮುಂದಿನ ಪೀಳಿಗೆ ಸೋಶಿಯಲ್ ಮೀಡಿಯಾ ಹಾಗೂ ಯುವ ಶಕ್ತಿಯ ಪೀಳಿಗೆಯಾಗಿದ್ದು, ಅವರನ್ನು ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದು ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

 

ಸಂಸತ್ ಕಲಾಪ ಹಾಳು ಮಾಡುವುದೇ ವಿಪಕ್ಷ ಉದ್ದೇಶ:

ಕಳೆದ ಜುಲೈ 20ರಿಂದ ಆಗಸ್ಟ್ 13ರವರೆಗಿನ ಸಂಸತ್ ಅಧಿವೇಶನದಲ್ಲಿ ಲೋಕಸಭೆ ಕೇವಲ ಶೇ. 9 ಹಾಗೂ ರಾಜ್ಯಸಭೆ ಶೇ. 39ರಷ್ಟು ಮಾತ್ರ ಕಲಾಪ ನಡೆಸಲು ಸಾಧ್ಯವಾಗಿದೆ. ಎನ್‌ಡಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಅಥವಾ ವಂಶಪಾರಂಪರ್ಯ ಆಡಳಿತದ ಯಾವುದೇ ಆರೋಪ ಮಾಡಲು ವಿಷಯಗಳಿಲ್ಲದ ವಿಪಕ್ಷಗಳು, ಸಂಸತ್ತಿನ ಒಳಗಡೆ ಚರ್ಚೆಗೆ ಅವಕಾಶ ನೀಡದೆ ಕಲಾಪವನ್ನು ಹಾಳುಗೆಡವಿದೆ ಎಂದರು

 

ವಿದ್ಯಾರ್ಥಿಗಳ ವಿಷಯದಲ್ಲಿ ರಾಜಕೀಯ: ನೀಟ್ ಪರೀಕ್ಷೆಯ ಸಮಸ್ಯೆಗೆ ಸರ್ಕಾರ ತಕ್ಷಣವೇ ಪರಿಹಾರ ಹಾಗೂ ಮರುಪರೀಕ್ಷೆಯ ಕ್ರಮ ಕೈಗೊಂಡಿದೆ. ಆದರೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಎದುರಿಗಿಟ್ಟು ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ನಾಗರಾಜ್ ಆರೋಪಿಸಿದರು.

 

ತುಷ್ಟೀಕರಣ ರಾಜಕೀಯ: ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಿಡಬ್ಲ್ಯೂಸಿ ತೆಗೆದುಕೊಂಡ ನಿರ್ಧಾರ ಹಾಗೂ ನಿಲುವುಗಳನ್ನು ಖಂಡಿಸಿದ ಅವರು, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕೀಯದಲ್ಲಿ ನಿರತವಾಗಿದೆ. 1937ರ ಮೊಹಮ್ಮದ್ ಅಲಿ ಜಿನ್ನಾ ಅವರ ಕಾಲದ ರಾಜಕೀಯ ತಂತ್ರಗಳನ್ನು ಕಾಂಗ್ರೆಸ್ ಇಂದು ಪುನರಾವರ್ತಿಸುತ್ತಿದೆ ಎಂದರು.

 

ತಪ್ಪು ಮರೆಮಾಚಲು ದಲಿತ ಕಾರ್ಡ್: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ 75ರಿಂದ 100 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ನೇರವಾಗಿ ದುರ್ಬಳಕೆ ಮಾಡಲಾಗಿದೆ. ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ತಪ್ಪು ಮರೆಮಾಚಲು ‘ದಲಿತ’ ಕಾರ್ಡ್ ಬಳಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

 

ಮೋದಿ ಆಡಳಿತದ ಶ್ಲಾಘನೆ: ಪ್ರಧಾನಿ ನರೇಂದ್ರ ಮೋದಿ ಅವರು 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ 12ಕ್ಕೂ ಹೆಚ್ಚು ವರ್ಷಗಳಿಂದ ಪ್ರಧಾನಿಯಾಗಿ ಯಶಸ್ವಿ ಅಭಿವೃದ್ಧಿಪರ ಆಡಳಿತ ನೀಡಿದ್ದಾರೆ. ಇಡೀ ವಿಶ್ವವೇ ‘ಗುಜರಾತ್ ಮಾಡೆಲ್’ ಅನ್ನು ಗೌರವಿಸುತ್ತಿದೆ. ಯುವ ಸಮೂಹಕ್ಕೆ ಪ್ರತಿಪಕ್ಷಗಳು ಹರಡುತ್ತಿರುವ ಸುಳ್ಳು ಮಾಹಿತಿಯನ್ನು ಬಿಜೆಪಿ ಕಾರ್ಯಕರ್ತರು ಸಮರ್ಥವಾಗಿ ತಲುಪಿ ತಿಳಿಹೇಳಬೇಕಿದೆ ಎಂದರು.

​ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಹಾಗೂ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here