


ಮಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ. ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವುದಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂಬರುವ ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವವರೆಗೆ ಅರಣ್ಯ ಇಲಾಖೆಯು ಕೃಷಿಕರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.





ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಈ ವಿಷಯದ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಶೀಘ್ರ ‘ವಿಶೇಷ ಅಧಿವೇಶನ’ ಕರೆಯಲಿದೆ. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದರು.


ಉಪಗ್ರಹ ಅಥವಾ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದಾಗ ರಬ್ಬರ್ ಹಾಗೂ ಅಡಕೆ ತೋಟಗಳು ಅರಣ್ಯದಂತೆ ಕಾಣಿಸುತ್ತವೆ. ಭೂಮಟ್ಟದ ವಾಸ್ತವತೆಯನ್ನು ಅರಿಯದೇ ಕೇವಲ ನಕ್ಷೆ ನೋಡಿ ಕರಾವಳಿ ಮತ್ತು ಮಲೆನಾಡಿನ ದಟ್ಟ ಜನವಸತಿ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಿರುವುದು ಸತ್ಯಕ್ಕೆ ತೀರಾ ದೂರವಾದ ಸಂಗತಿ. ಪರಿಸರ ಸೂಕ್ಷ್ಮ ವಲಯವೆಂಬ ನೆಪದಲ್ಲಿ ಸ್ಥಳೀಯರು ಮನೆ ನಿರ್ಮಿಸಲು, ಕೃಷಿ-ತೋಟಗಾರಿಕೆ ಚಟುವಟಿಕೆ ನಡೆಸಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿ ಕಿರುಕುಳ ನೀಡುತ್ತಿದ್ದಾರೆ. ಇದು ಸಲ್ಲದು ಎಂದು ಹೇಳಿದರು.
ಕೇಂದ್ರದ ಮಟ್ಟದಲ್ಲಿ ಧ್ವನಿ ಎತ್ತಲು ಆಗ್ರಹ:
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಈ ವಿಷಯದಲ್ಲಿ ಸಮನ್ವಯದ ಕೊರತೆಯಿದೆ. ಕರಾವಳಿ ಭಾಗವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಕೇವಲ ಹೇಳಿಕೆಗಳನ್ನು ನೀಡದೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.
ರೈಲ್ವೆ ನಿರ್ಧಾರ ಸ್ವಾಗತಾರ್ಹ:
ಮಂಗಳೂರು ರೈಲ್ವೆ ವಲಯವು ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಕಾರಣ ರೈಲ್ವೆಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆ ಈಡೇರಲು ಅನುಕೂಲವಾಗಿದೆ. ಬಿಜೆಪಿ ಸಂಸದರು ಎಲ್ಲರನ್ನುವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿ ಎಂದರು.
ಜವಾಬ್ದಾರಿ ಕೊಟ್ಟರೆ ಜಿಲ್ಲಾಧ್ಯಕ್ಷ ಸ್ಥಾನ ಸ್ವೀಕರಿಸುವೆ..
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಜವಾಬ್ದಾರಿಯುತವಾಗಿದ್ದು, ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದೆ. ಜಿಲ್ಲೆಯಾದ್ಯಂತ ಓಡಾಟ ನಡೆಸಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಹೈಕಮಾಂಡ್ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಖಂಡಿತವಾಗಿ ಸ್ವೀಕರಿಸುತ್ತೇನೆ ಎಂದು ಐವನ್ ಡಿಸೋಜ ಹೇಳಿದರು.








