


ಮಂಗಳೂರು: ಮಂಗಳೂರು ನಗರದ ಯೋಜನಾಬದ್ಧ ಬೆಳವಣಿಗೆಗೆ ಬಹುಮುಖ್ಯವಾಗಿರುವ ‘ಮಾಸ್ಟರ್ ಪ್ಲಾನ್’ ಜಾರಿಗೆ ತರುವುದೇ ತನ್ನ ಮೊದಲ ಆದ್ಯತೆ ಎಂದು ಮೂಡದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ.


ಸೋಮವಾರ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಜನವರಿ ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ ಕೇಳಿದ್ದ ಸ್ಪಷ್ಟೀಕರಣಗಳನ್ನೂ ನೀಡಲಾಗಿದೆ. ಇದರಲ್ಲಿರುವ ಸಣ್ಣಪುಟ್ಟ ತೊಡಕುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಶೀಘ್ರವೇ ಸರ್ಕಾರದ ಅಂತಿಮ ಅನುಮೋದನೆ ಪಡೆದು ಜಾರಿಗೆ ತರಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.


ಲೇಔಟ್ ಹಾಗೂ ನಿವೇಶನ ಹಂಚಿಕೆ ಪ್ರಕ್ರಿಯೆ ಚುರುಕು:
ಮೂಡ ವ್ಯಾಪ್ತಿಯ ವಿವಿಧ ಬಡಾವಣೆಗಳ (ಲೇಔಟ್ಗಳ) ನಿವೇಶನ ಹಂಚಿಕೆ ಹಾಗೂ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಸಂತೋಷ್ ಶೆಟ್ಟಿ, ಕುಂಜತ್ತಬೈಲ್ ಲೇಔಟ್ ಒಟ್ಟು 18 ಎಕರೆ ಪ್ರದೇಶದಲ್ಲಿದ್ದು, ಸುಮಾರು 200 ನಿವೇಶನಗಳಿವೆ. ಇದರಲ್ಲಿ ಈಗಾಗಲೇ 35 ನಿವೇಶನಗಳ ಹಂಚಿಕೆಯಾಗಿದ್ದು, ಉಳಿದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೋಣಾಜೆ ಲೇಔಟ್ 13.5 ಎಕರೆ ಪ್ರದೇಶದಲ್ಲಿದ್ದು, 142 ನಿವೇಶನಗಳಿವೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರವೇ ಕೆಲಸ ಮುಂದುವರಿಸಲಾಗುವುದು. ಚೇಳ್ಯಾರು ಲೇಔಟ್ 45 ಎಕರೆ ಪ್ರದೇಶದಲ್ಲಿ ಸುಮಾರು 7೦೦ ನಿವೇಶನಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ದರ ಹೆಚ್ಚಳದ ಕುರಿತು ಉಂಟಾಗಿದ್ದ ಗೊಂದಲವನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.


ನಗರ ವಿಸ್ತರಣೆ, ಫ್ಲೈ ಓವರ್, ಅಂಡರ್ಪಾಸ್ ಯೋಜನೆ:
ಮೂಡ ಕೇವಲ ನಿವೇಶನ ಹಂಚಿಕೆಗೆ ಮಾತ್ರ ಸೀಮಿತವಾಗದೆ, ಇಡೀ ಮಂಗಳೂರು ನಗರದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮಂಗಳೂರು ನಗರವು ಒಂದೇ ಭಾಗದಲ್ಲಿ ಬೆಳೆಯದೆ ಸುರತ್ಕಲ್, ಬೈಕಂಪಾಡಿ, ಮೂಲ್ಕಿ ಭಾಗಗಳತ್ತ ವಿಸ್ತರಣೆಯಾಗಬೇಕಿದೆ. ಅದಕ್ಕೆ ಅಗತ್ಯವಾದ ರಸ್ತೆ ಹಾಗೂ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೂಡ ವತಿಯಿಂದ ಫ್ಲೈ ಓವರ್ (ಮೇಲ್ಸೇತುವೆ) ಹಾಗೂ ಅಂಡರ್ಪಾಸ್ (ಕೆಳಸೇತುವೆ) ನಿರ್ಮಾಣ ಮಾಡುವ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪಾರ್ಕ್ ಅಭಿವೃದ್ಧಿ, ಕೆರೆಗಳ ಪುನಶ್ಚೇತನ:
ಮೂಡ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಗಳಿಗೆ ವೇಗ ನೀಡಲಾಗುವುದು. ಕದ್ರಿ ಪಾರ್ಕ್ನಂತೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ನಗರದಲ್ಲಿ ಜಾಗದ ಅಭಾವವಿದೆ. ಆದ್ದರಿಂದ ವಸತಿ ಪ್ರದೇಶಗಳಲ್ಲಿ ಲಭ್ಯವಿರುವ 25 ಸೆಂಟ್ಸ್, 50 ಸೆಂಟ್ಸ್ ಹಾಗೂ ಖಾಸಗಿ ಜಾಗಗಳನ್ನು ಪಡೆದುಕೊಂಡು ಸಣ್ಣ ಸಣ್ಣ ಸುಂದರ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಂತೋಷ್ ಶೆಟ್ಟಿ ತಿಳಿಸಿದರು.
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ನಿವೇಶನ:
ಪ್ರಸ್ತುತ ನಗರದೊಳಗೆ ಜಾಗದ ಬೆಲೆ ಹೆಚ್ಚಿರುವುದರಿಂದ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ನಿವೇಶನ ಖರೀದಿಸುವುದು ಕಷ್ಟಕರವಾಗಿದೆ. ಆದ್ದರಿಂದ ನಗರದ ಹೊರವಲಯದಲ್ಲಿ ಮಧ್ಯಮ ವರ್ಗದವರ ಬಜೆಟ್ಗೆ ಸಿಗುವಂತೆ ಕೈಗೆಟುಕುವ ದರದಲ್ಲಿ ಮೂಡ ವತಿಯಿಂದ ನಿವೇಶನ ಹಾಗೂ ವಸತಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮೂಡ ಆಯುಕ್ತ ಮೊಹಮ್ಮದ್ ನಝೀರ್ ಮತ್ತಿತರರು ಇದ್ದರು.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್, ನಿಯಮಗಳ ಸರಳೀಕರಣ
ಪ್ರಾಧಿಕಾರದಲ್ಲಿ ಮಧ್ಯವರ್ತಿಗಳು/ ಬ್ರೋಕರ್ಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮೂಡದ ನಿಯಮಗಳು ಹಾಗೂ ಪ್ರಕ್ರಿಯೆಗಳು ಸಂಕೀರ್ಣವಾಗಿರುವುದರಿಂದ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಜನಪ್ರತಿನಿಧಿಗಳು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಗಳ ಸರಳೀಕರಣ ಮಾಡಲಾಗುವುದು. ಸಾರ್ವಜನಿಕರು ನೇರವಾಗಿ ಬಂದು ತಮ್ಮ ಕೆಲಸ ಮಾಡಿಕೊಳ್ಳುವ ವಾತಾವರಣ ನಿರ್ಮಿಸಲಾಗುವುದು ಎಂದು ಸಂತೋಷ್ ಶೆಟ್ಟಿ ತಿಳಿಸಿದರು.








