


ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಇದೀಗ 395 ಪವರ್ ಮ್ಯಾನ್ ಗಳನ್ನು ನೇಮಕ ಮಾಡಿದ್ದು, ಇನ್ನೂ 165 ಪವರ್ ಮ್ಯಾನ್ ಗಳ ಕೊರತೆ ಇದೆ, ಶೀಘ್ರ ನೇಮಕಾತಿ ನಡೆಸಲಾಗುವುದು ಎಂದು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಗೊಂಡ 395 ಸಿಬ್ಬಂದಿಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯವರು ಕೇವಲ 5 ಮಂದಿ. ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಂದ ನೇಮಕಗೊಂಡವರ ಸಂಖ್ಯೆ ಕೇವಲ 50. ಬಹುತೇಕರು ಉತ್ತರ ಕರ್ನಾಟಕ ಜಿಲ್ಲೆಯವರು. ಮೆಸ್ಕಾಂ ವ್ಯಾಪ್ತಿಯಿಂದಲೇ ಪವರ್ ಮ್ಯಾನ್ ಗಳನ್ನು ನೇಮಕ ಮಾಡಲು ಮುಂದಿನ ದಿನಗಳಲ್ಲಿ ಎಲ್ಲ ಎಸ್ಕಾಂಗಳಿಗೆ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.


ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಪವರ್ ಮ್ಯಾನ್ ನೇಮಕಾತಿ ನಡೆದಿತ್ತು. ಪವರ್ ಮ್ಯಾನ್ಗಳು ಬೇರೆ ಎಸ್ಕಾಂಗಳಿಗೆ ವರ್ಗಾವಣೆಯಾಗಲು ಅವಕಾಶವಿಲ್ಲ ಎಂಬ ಷರತ್ತನ್ನು ಆಗ ವಿಧಿಸಲಾಗಿತ್ತು. ಆದರೆ, ಉಡುಪಿ ಜಿಲ್ಲೆಯ ಶಾಸಕರೊಬ್ಬರು ಇಂಧನ ಸಚಿವರಾದ ಬಳಿಕ ಆ ಷರತ್ತನ್ನು ರದ್ದುಪಡಿಸಲಾಯಿತು. ಈಗ ಅನೇಕ ಪವರ್ ಮ್ಯಾನ್ ಗಳಿಗೆ ವರ್ಗಾವಣೆ ಆದರೂ ಅವರನ್ನು ಇಲ್ಲೇ ಉಳಿಸಿಕೊಂಡಿದ್ದೇವೆ ಎಂದು ಹರೀಶ್ ಕುಮಾರ್ ಹೇಳಿದರು.


ಅರಣ್ಯ ಪ್ರದೇಶಗಳಲ್ಲಿ ಕವರ್ಡ್ ಕಂಡಕ್ಟರ್:
‘ಆನೆ ಕಾರಿಡಾರ್ ಇರುವ ಕಡೆ ಹಾಗೂ ಕಾಡು ಪ್ರದೇಶಗಳ ಬಳಿ ವಿದ್ಯುತ್ ಮಾರ್ಗವನ್ನು ಕವರ್ಡ್ ಕಂಡಕ್ಟರ್ (ವಿದ್ಯುತ್ ತಂತಿಗೆ ಸುರಕ್ಷಾ ಕವಚ) ಆಗಿ ಮಾರ್ಪಡಿಸಲಾಗುವುದು. ಪುತ್ತೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು-1 ಮತ್ತು 2, ಕೊಪ್ಪ, ಕುಂದಾಪುರ ವಿಭಾಗಗಳ ವ್ಯಾಪ್ತಿಯಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.
305 ಕೋಟಿ ರು. ಬಿಲ್ ಬಾಕಿ:
ಗ್ರಾಮ ಪಂಚಾಯಿತಿಗಳಿಂದ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಮೆಸ್ಕಾಂಗೆ ₹ 305.84 ಕೋಟಿ ಬಿಲ್ ಬಾಕಿ ಇದೆ ಎಂದರು.
ಭೂಗತ ಕೇಬಲ್:
‘ಉಳ್ಳಾಲ, ಮಣ್ಣಗುಡ್ಡ ಹಾಗೂ ಕಾವೂರು ಉಪವಿಭಾಗಗಳಲ್ಲಿ ನೆಲದಡಿಯಲ್ಲಿ ವಿದ್ಯುತ್ ಮಾರ್ಗ ಅಳವಡಿಸಲು ಕ್ರಮ ವಹಿಸಲಾಗಿದ್ದು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಈ ಮಳೆಗಾಲದಲ್ಲಿ ₹ 25 ಕೋಟಿ ನಷ್ಟ
ಈ ಮಳೆಗಾಲದಲ್ಲಿ ಗಾಳಿ- ಮಳೆಯಿಂದಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 17,770 ವಿದ್ಯುತ್ ಕಂಬ ಹಾಗೂ 496.37 ಕಿ.ಮೀ ವಿದ್ಯುತ್ ಮಾರ್ಗಕ್ಕೆ ಹಾನಿ ಉಂಟಾಗಿದ್ದು, ₹ 25.77 ಕೋಟಿ ನಷ್ಟ ಉಂಟಾಗಿದೆ. ಮಳೆಗಾಲದಲ್ಲಿ ತುರ್ತು ನಿರ್ವಹಣಾ ಕೆಲಸ ನಿರ್ವಹಿಸಲು 489 ಮಂದಿಯ ಕಾರ್ಯಪಡೆ ಹಾಗೂ 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ದೂರವಾಣಿ ಕರೆಗಳ ನಿರ್ವಹಣೆಗೆ 23 ಮಂದಿಯ ವಿಶೇಷ ಪಡೆ ಸಜ್ಜಾಗಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.








