ರಾಷ್ಟ್ರೀಯ ತನಿಖಾಧಿಕಾರಿ ಸೋಗು ಹಾಕಿ ವಂಚಿಸುತ್ತಿದ್ದ ಕುಖ್ಯಾತ ಆರೋಪಿ ಅಂದರ್ – ಮಂಗಳೂರು ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆ – ರಾಜ್ಯದ ವಿವಿಧ ಜಿಲ್ಲೆ, ಹೊರರಾಜ್ಯಗಳಲ್ಲಿ 17 ಪ್ರಕರಣಗಳ ಆರೋಪಿ ಕೊನೆಗೂ ಬಂಧನ

ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳದ ಅಧಿಕಾರಿ ಮತ್ತು ನಿರ್ದೇಶಕ ಎಂದು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿದ್ದ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ ಅಲಿಯಾಸ್ ಆಂಟನಿ (64) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಲ್ಲಂ ಮೂಲದವನಾದ ಪೀಟರ್, ಉತ್ತರ ಪ್ರದೇಶದ ಲಕ್ನೋದ ಸರೋಜಿನಿ ನಗರದಲ್ಲಿ ವಾಸಿಸುತ್ತಿದ್ದ. 3 ವರ್ಷಗಳ ಹಿಂದೆ ಕೋರ್ಟ್ ನಿಂದ ಜಾಮೀನು ಪಡೆದ ನಂತರ ಈತ ತಲೆಮರೆಸಿಕೊಂಡಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ.

ಈತ ಗ್ಯಾಂಗ್ ಒಂದನ್ನು ರಚಿಸಿ ರಾಷ್ಟ್ರೀಯ ಅಪರಾಧ ತನಿಖಾ ದಳದ ಅಧಿಕಾರಿಗಳೆಂದು ಬಿಂಬಿಸಿ, ಜನರನ್ನು ವಂಚಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಆರ್ಥಿಕ ವಿವಾದಗಳು, ಬ್ಯಾಂಕ್ ವಂಚನೆ ಮತ್ತು ತೆರಿಗೆ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಪ್ರಕರಣ ಇತ್ಯರ್ಥ ಮಾಡುವುದಾಗಿ ನಂಬಿಸಿ ಕೋಟ್ಯಂತರ ರು. ವಂಚನೆ ಮಾಡುತ್ತಿದ್ದ. 2019ರಲ್ಲಿ ಮಂಗಳೂರು ಪೂರ್ವ ಪೊಲೀಸರು ಪಂಪ್‌ವೆಲ್‌ನಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿ ಪೀಟರ್ ಮತ್ತು ಅವರ ಗ್ಯಾಂಗ್‌ನ ಎಂಟು ಸದಸ್ಯರನ್ನು ಬಂಧಿಸಿದ್ದರು. ನಂತರ ನ್ಯಾಯಾಲಯವು ಅವನಿಗೆ ಜಾಮೀನು ನೀಡಿತ್ತು. ಆದರೂ ನಂತರದ ವಿಚಾರಣಾ ಪ್ರಕ್ರಿಯೆಗಳಿಗೆ ಹಾಜರಾಗದೆ ಈತ ತಲೆಮರೆಸಿಕೊಂಡಿದ್ದ.

ಹೆಸರು, ಗುರುತು ಬದಲಿಸುತ್ತಿದ್ದ:

ಆರೋಪಿ ಪೀಟರ್ ಆಗಾಗ ತನ್ನ ಗುರುತನ್ನು ಬದಲಾಯಿಸುತ್ತಿದ್ದ ಮತ್ತು ವಿವಿಧ ಸ್ಥಳಗಳಲ್ಲಿ ವಿಭಿನ್ನ ಹೆಸರುಗಳನ್ನು ಬಳಸುತ್ತಿದ್ದ. ತನಿಖೆಯಲ್ಲಿ ಅವನು ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರಿತು ರಿಚರ್ಡ್, ರಾಯ್ ಜಾಕೋಬ್, ರಾಬಿನ್ ರಿಚರ್ಡ್ಸನ್, ರಾಬಿನ್ಸನ್, ಆಂಟೋನಿ ಫ್ರಾನ್ಸಿಸ್, ಶರೂನ್ ಫ್ರಾನ್ಸಿಸ್ ಮತ್ತು ಇತ್ತೀಚೆಗೆ ಡ್ಯಾನಿ ತಾರಕನ್ ಎಂಬ ಹೆಸರುಗಳನ್ನು ಬಳಸುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಒಂದು ಸ್ಥಳದಲ್ಲಿ ಅಪರಾಧಗಳನ್ನು ಮಾಡಿ, ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದ. ಅಲ್ಲಿ ಹೊಸ ಗೆಟಪ್ ನಲ್ಲಿ ಇರುತ್ತಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

17 ಪ್ರಕರಣಗಳ ಆರೋಪಿ:

ವಂಚನೆಗೆ ಸಂಬಂಧಿಸಿದಂತೆ ಸುಮಾರು 17 ಪ್ರಕರಣಗಳು ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಮಂಗಳೂರು ಪೂರ್ವ, ಉಳ್ಳಾಲ, ಕೊಣಾಜೆ, ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ ನಗರ, ಕುಶಾಲನಗರ, ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶಗಳಲ್ಲಿ ಈತನ ಮೇಲೆ ಪ್ರಕರಣಗಳಿವೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್ ವಿರುದ್ಧ ಹದಿನೇಳು ವಾರಂಟ್‌ಗಳನ್ನು ಹೊರಡಿಸಲಾಗಿತ್ತು. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 14 ವಾರಂಟ್‌ ಹೊರಡಿಸಲಾಗಿತ್ತು. ಬಳಿಕ ಘೋಷಿತ ಅಪರಾಧಿಯೆಂದು ಗುರುತಿಸಲಾಗಿತ್ತು.

ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

 

LEAVE A REPLY

Please enter your comment!
Please enter your name here