


ಮಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಫಲಾನುಭವಿಗಳ ಮನೆ ಮನೆಗೆ ತೆರಳಿ ಮರುಪರಿಶೀಲನೆ ನಡೆಸಲು ಮುಂದಿನ 10 ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಮತ್ತು ವಾರ್ಡ್ ಮಟ್ಟದಲ್ಲಿ 6 ಸದಸ್ಯರ ಸಮಿತಿ ರಚಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.





ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಿತಿಯಲ್ಲಿ ಪಕ್ಷದ ಇಬ್ಬರು ಮಹಿಳೆಯರು, ಒಬ್ಬರು ಎಸ್‌ಸಿ/ ಎಸ್‌ಟಿ, ಒಬ್ಬರು ಸಾಮಾನ್ಯ ವರ್ಗ, ಒಬ್ಬರು ಅಲ್ಪಸಂಖ್ಯಾತ ಮತ್ತು ಒಬ್ಬರು ಒಬಿಸಿ ಸಮುದಾಯದ ಪ್ರತಿನಿಧಿಗಳಿರುತ್ತಾರೆ. ಇವರೊಂದಿಗೆ ಪಂಚಾಯ್ತಿ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪರಿಶೀಲನಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗೃಹಲಕ್ಷ್ಮಿ ಫಲಾನುಭವಿಗಳು ಮರು ಪರಿಶೀಲನೆಗೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸಮಿತಿಯ ಸದಸ್ಯರು ನೇರವಾಗಿ ಮನೆಗಳಿಗೆ ತೆರಳಿ ಫಲಾನುಭವಿಗಳ ನೈಜ ಮಾಹಿತಿ, ಆಧಾರ್, ಫೋಟೊ ಮತ್ತಿತರ ವಿವರಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಅಪ್ಲಿಕೇಶನ್ ಭರ್ತಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಗೆ ‘ಇಂದಿರಾ ಫುಡ್ ಕಿಟ್’:
ಪಡಿತರ ಅಕ್ಕಿ ಕಾಳಸಂತೆ ಪಾಲಾಗುವುದನ್ನು ತಡೆದು ಪೌಷ್ಟಿಕ ಆಹಾರ ತಲುಪಿಸುವ ಉದ್ದೇಶದಿಂದ ಶೀಘ್ರದಲ್ಲೇ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನೊಳಗೊಂಡ ‘ಇಂದಿರಾ ಫುಡ್ ಕಿಟ್’ ವಿತರಿಸಲಾಗುವುದು. ಈ ಕಿಟ್‌ಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಪೂರೈಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ಎಚ್.ಎಂ. ರೇವಣ್ಣ ಹೇಳಿದರು.
ರಾಜ್ಯದಲ್ಲಿ ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದ ₹ 117 ಕೋಟಿಯಲ್ಲಿ ಈಗಾಗಲೇ ₹ 30 ಕೋಟಿ ವಸೂಲಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮೆಯಾಗಿದ್ದ ₹ 3.34 ಕೋಟಿಯಲ್ಲಿ ₹ 1.60 ಕೋಟಿ ಹಿಂಪಡೆಯಲಾಗಿದೆ. ಮೃತಪಟ್ಟ ಮಹಿಳೆಯ ಕುಟುಂಬದಲ್ಲಿರುವ ಮತ್ತೊಬ್ಬ ಅರ್ಹ ಮಹಿಳಾ ಸದಸ್ಯರಿಗೆ ಯೋಜನೆಯ ಸೌಲಭ್ಯವನ್ನು ವರ್ಗಾಯಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಅಲಿಸ್ಟನ್ ಡಿಕುನ್ಹಾ ಮತ್ತಿತರರು ಇದ್ದರು.


2028ರ ನಂತರವೂ ಗ್ಯಾರಂಟಿ
ರಾಜ್ಯದ ಐದೂ ಗ್ಯಾರಂಟಿ ಯೋಜನೆಗಳು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಮಹಿಳೆಯರ ಸಬಲೀಕರಣಕ್ಕೆ ನೆರವಾಗಿವೆ. ಹೀಗಾಗಿ ಈ ಯೋಜನೆಗಳನ್ನು 2028ರ ನಂತರವೂ ಮುಂದುವರಿಸಲಾಗುವುದು ಎಂದು ಎಚ್.ಎಂ. ರೇವಣ್ಣ ಭರವಸೆ ವ್ಯಕ್ತಪಡಿಸಿದರು.








