


ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಪೇಮೆಂಟ್ ಕೋಟಾದಡಿ ಸಚಿವರಾದವರು ಪೇಮೆಂಟ್ ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆರೋಪಿಸಿದ್ದಾರೆ.





ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿದ್ದು, ಸರ್ಕಾರದ ಸಚಿವರುಗಳೇ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವುದೆ ಇದಕ್ಕೆ ಸಾಕ್ಷಿ ಎಂದರು.


ಲೋಕಾಯುಕ್ತ ಎನ್.ಬಿ. ವೀರಪ್ಪ ಅವರು ಕರ್ನಾಟಕದಲ್ಲಿ ೧೦೦ರಲ್ಲಿ ೬೩ಮಂದಿ ಲಂಚ ಕೊಡಬೇಕಾಗಿದೆ ಎಂದು ಹೇಳಿರುವುದು ರಾಜ್ಯದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ. ಈ ಮೂಲಕ ರಾಜ್ಯದಲ್ಲಿ ಲಂಚ ಗ್ಯಾರಂಟಿಯ ಸರ್ಕಾರ ಆಡಳಿತ ನಡೆಸುತ್ತಿರುವುದು ಸ್ಪಷ್ಟವಾಗಿದೆ ಎಂದು ಭರತ್ ಶೆಟ್ಟಿ ಟೀಕಿಸಿದರು.
ರಾಜ್ಯದಲ್ಲಿ ಮಂತ್ರಿಗಳಿಗೆ ಕಮಿಷನ್ ಕೊಡಬೇಕೆಂದು ಅಧಿಕಾರಿಗಳು ಲಂಚ ಸಂಗ್ರಹದಲ್ಲಿ ತೊಡಗಿದ್ದಾರೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಕೆಆರ್ಡಿಎಲ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್, ಮಾಧ್ಯಮ ಸಂಚಾಲಕ ಅರುಣ್ ಶೇಟ್ ಇದ್ದರು.








