


ಮಂಗಳೂರು: ಕರಾವಳಿ ಜಿಲ್ಲೆಗಳ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿ ಹಕ್ಕು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಪರಿಹಾರಕ್ಕೆ ನಿಯಮ ರೂಪಿಸುವಂತೆ ಒತ್ತಾಯಿಸಿ ಕೊರಗ ಪ್ರತಿನಿಧಿಗಳು ಸೋಮವಾರ ಪಡೀಲ್ ವೃತ್ತದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧಕ್ಕೆ ಮೌನ ಜಾಥಾ ನಡೆಸಿದರು. ಬಳಿಕ ಸಮುದಾಯದ ನಾಯಕರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.





ಪ್ರತಿ ಕೊರಗ ಕುಟುಂಬಗಳಿಗೆ ಕನಿಷ್ಠ ೨.೫ ಎಕರೆ ಕೃಷಿ ಯೋಗ್ಯ ಭೂಮಿ ವಿತರಿಸಲು ಮತ್ತು ಪುನರ್ವಸತಿ ಕಾರ್ಯವನ್ನು ಏಕಕಾಲದಲ್ಲಿ ನೆರವೇರಿಸಲು ಸೂಕ್ತ ಕ್ರಮ ಜರುಗಿಸುವುದು. ಸರ್ಕಾರ ಬುಡಕಟ್ಟು ಸಮುದಾಯಗಳಿಗೆ ಶೇ.೧೦೦ ನೇರ ನೇಮಕಾತಿ ಅಡಿಯಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡುವ ಘೋಷಣೆಯನ್ನು ಈಡೇರಿಸಲು ಸೂಕ್ತ ನಿಯಮ ಜಾರಿಗೊಳಿಸಬೇಕು. ಕಳೆದ ಆರು ತಿಂಗಳಿನಿಂದ ಏತರಣೆಗೆ ಬಾಕಿ ಉಳಿದಿರುವ ಪೌಷ್ಠಿಕ ಆಹಾರವನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಸುಂದರ ಕೊರಗ, ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಬಾಬು ಪಾಂಗಳ, ದ.ಕ. ಜಿಲ್ಲಾ ಸಂಘದ ಕಾರ್ಯದರ್ಶಿ ಶಶಿಕಲಾ ಕೋಡಿಕಲ್, ಉಪಾಧ್ಯಕ್ಷ ಕೊಗ್ಗ ರಮೇಶ್, ಬೆಳ್ತಂಗಡಿ ತಾಲೂಕು ಘಟಕದ ಸಂತೋಷ್, ಸುಳ್ಯದ ರಾಮಚಂದ್ರ, ಉಳ್ಳಾಲದ ಕಮಲ, ಪುತ್ತೂರಿನ ಕುಂಬ್ರ ಬಾಬು, ಕಮಲ ಉಪ್ಪಿನಂಗಡಿ, ಬಂಟ್ವಾಳದ ಮಾಂಕು ಪಚ್ಚನಡ್ಕ, ಕಾರ್ಕಳ ತಾಲೂಕು ಘಟಕದ ಕುಡುಪ ಸಚ್ಚರಿಪೇಟೆ, ಮಂಗಳೂರು ನಗರ ವಲಯ ಘಟಕದ ಬೇಬಿ ಮತ್ತಿತರರು ಇದ್ದರು.








